ನವದೆಹಲಿ: ಇಡೀ ಜಗತ್ತಿನ ಜನರು ಭಾರತ ತಿಳಿದುಕೊಳ್ಳಲು ಮುಂದಾಗಿದ್ದಾರೆ. ಭಾರತವು ಪ್ರತಿದಿನ ಸಕಾರಾತ್ಮಕ ಸುದ್ದಿಗಳನ್ನು ಸೃಷ್ಟಿಸುತ್ತಿರುವ ವಿಶ್ವ ದೇಶವಾಗಿದೆ. ಭಾರತದಲ್ಲಿ ಪ್ರತಿ ದಿನವೂ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿದ್ದಾರೆ.
ಭಾರತ್ ಮಂಟಪದಲ್ಲಿ (Bharat Mantap) ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫೆ. 26 ರಂದು ಪ್ರಯಾಗ್ ರಾಜ್ ನಲ್ಲಿ ಏಕತೆಯ ಮಹಾ ಕುಂಭ ಮೇಳ ಮುಕ್ತಾಯವಾಗಿದೆ. ನದಿಯ ದಡದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಸ್ಥಳದಲ್ಲಿ ಲಕ್ಷಾಂತರ ಜನರು ಪವಿತ್ರ ಸ್ನಾನ ಮಾಡಲು ಯಾವ ರೀತಿ ಬರುತ್ತಾರೆ ಎಂಬುವುದನ್ನು ಕಂಡು ಇಡೀ ವಿಶ್ವ ಬೆರಗಾಗುತ್ತಿದೆ. ನಾವು ವಿಶ್ವ ಶಕ್ತಿಯಾಗುತ್ತಿದ್ದೇವೆ ಎಂದಿದ್ದಾರೆ.
ಭಾರತದ ಸಂಘಟನಾ ಮತ್ತು ನಾವೀನ್ಯತೆ ಕೌಶಲ್ಯಗಳನ್ನು ಜಗತ್ತು ಗಮನಿಸುತ್ತಿದೆ. ಜಗತ್ತು ಈ ಭಾರತವನ್ನು ವಿವರವಾಗಿ ತಿಳಿದುಕೊಳ್ಳಲು ಬಯಸುತ್ತದೆ. ಭಾರತವು ವಿಶ್ವದ 7ನೇ ಅತಿದೊಡ್ಡ ಕಾಫಿ ರಫ್ತು ಮಾಡುವ ರಾಷ್ಟ್ರವಾಗಿದೆ. ದಶಕಗಳಿಂದ, ಜಗತ್ತು ಭಾರತವನ್ನು ತನ್ನ ಬ್ಯಾಕ್ ಆಫೀಸ್ ಎಂದು ಕರೆಯುತ್ತಿತ್ತು. ಆದರಿಂದು ಭಾರತವು ವಿಶ್ವದ ಹೊಸ ಕಾರ್ಖಾನೆಯಾಗುತ್ತಿದೆ.
ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ. ಇದು ದಕ್ಷ ಮತ್ತು ಪರಿಣಾಮಕಾರಿ ಆಡಳಿತದ ಮಂತ್ರ. ಕಳೆದ ದಶಕದಲ್ಲಿ ಪ್ರಾಮುಖ್ಯತೆಯನ್ನು ಕಳೆದುಕೊಂಡಿದ್ದ ಸುಮಾರು 1,500 ಕಾನೂನುಗಳನ್ನು ರದ್ದುಪಡಿಸಿದ್ದೇವೆ. ಇವುಗಳಲ್ಲಿ ಹಲವು ಕಾನೂನುಗಳನ್ನು ಬ್ರಿಟಿಷ್ ಆಳ್ವಿಕೆಯಲ್ಲಿ ರಚಿಸಿದ್ದವು. ಈ ಕಾನೂನಿನ ಬಗ್ಗೆ ಈ ಜನರು 75 ವರ್ಷಗಳ ಕಾಲ ಏಕೆ ಮೌನವಾಗಿದ್ದರು? ಎಂಬುದು ನನಗೆ ಹೆಚ್ಚಾಗಿ ಆಶ್ಚರ್ಯವಾಗಿದೆ ಎಂದಿದ್ದಾರೆ.