ಬೆಂಗಳೂರು : ಮಿಡಲ್ ಈಸ್ಟ್ನಲ್ಲಿ ನಡೆಯುತ್ತಿರುವ ಯುದ್ಧದಿಂದ ಭಾರತದಲ್ಲಿರುವ ಜನಸಾಮಾನ್ಯರು ಬೆಲೆ ಏರಿಕೆ ಬಿಸಿ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಧ್ಯಪ್ರಾಚ್ಯದಲ್ಲಿ ಹೊತ್ತಿ ಉರಿಯುತ್ತಿರುವ ಯುದ್ಧದ ಜ್ವಾಲೆಯ ಬಿಸಿ ಭಾರತಕ್ಕೂ ತಟ್ಟಿದೆ. ಈಗಾಗಲೇ ದೇಶಾದಾದ್ಯಂತ ಎಲ್ಪಿಜಿ ಸಿಲಿಂಡರ್ ಅಭಾವ ಉಂಟಾಗಿದ್ದು, ಕಮರ್ಷಿಯಲ್ ಸಿಲಿಂಡರ್ಗೆ 115 ರೂ. ಏರಿಕೆ ಆಗಿದೆ. ಇದರಂದ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ.
ಇದೀಗ ಬೆಂಗಳೂರಿನ ಜನಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಾಸ ಆಗಿರುವುದು ಇಡೀ ಹೋಟೆಲ್ ಉದ್ಯಮ ಸೇರಿದಂತೆ ಇದೀಗ ಪಿಜಿ ಮಾಲೀಕರಿಗೂ ಆತಂಕ ಶುರುವಾಗಿದೆ. ಈ ಹಿನ್ನೆಲೆ PG ಅಸೋಸಿಯೇಶನ್ ಕೋರ್ ಕಮಿಟಿ ಚರ್ಚಿಸಿ ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಿದೆ.
ಈ ಬಗ್ಗೆ ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹೇಳಿಕೆ ನೀಡಿದ್ದು, ಪಿಜಿಗಳಿಗೆ ಕಮರ್ಷಿಯಲ್ ಗ್ಯಾಸ್ ಸಿಗುತ್ತಿಲ್ಲ. ಸದ್ಯ ಇನ್ನೊಂದು ವಾರ ಇರುವ ಸಿಲಿಂಡರ್ನಲ್ಲೇ ಮ್ಯಾನೇಜ್ ಮಾಡುತ್ತೇವೆ. ಮುಂದೆ ಹೇಗೆ ಎಂಬ ಭೀತಿ ಎದುರಾಗಿದೆ ಎಂದು ಹೇಳಿದ್ದಾರೆ.
ಇನ್ನು, ಇದರಿಂದ ಊಟದ ಮೆನುವಿನಲ್ಲಿ ಬದಲಾವಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಿಜಿಗಳಲ್ಲಿ ಚಪಾತಿ, ರೊಟ್ಟಿ ಮಾಡದಂತೆ ನಿರ್ಧರಿಸಲಾಗಿದೆ. ಅನ್ನ, ಸಾಂಬಾರ್, ಪಲಾವ್ ಹೀಗೆ ಗ್ಯಾಸ್ ಕಡಿಮೆ ಬಳಕೆ ಆಗುವ ಪದಾರ್ಥಗಳನ್ನು ಮಾಡಲು ನಿರ್ಧರಿಸಲಾಗಿದೆ.
ಆ ಮೂಲಕ ಪಿಜಿಗಳಲ್ಲಿ ಇಂದಿನಿಂದಲೇ ಹೊಸ ಮೆನು ಜಾರಿ ಆಗುತ್ತೆ. ಕಮರ್ಷಿಯಲ್ ಗ್ಯಾಸ್ ದರ ಹೆಚ್ಚಾದರೂ ಹೆಚ್ಚಳ ಮಾಡಲ್ಲ. ಸದ್ಯ ನಾವೇ ಭರಿಸುತ್ತೇವೆ. ಇದೇ ದರ ಮುಂದುವರೆದರೆ ನೋಡಬೇಕಾಗುತ್ತೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮ ನೆರವಿಗೆ ಮುಂದಾಗಬೇಕಿದೆ ಎಂದು ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : 40 ದಿನದ ಮಗುವನ್ನೇ ಕೊಂದ ಪಾಪಿ ಅಜ್ಜಿ.. ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತಿರಾ!



















