ಬೆಂಗಳೂರು: ಕಬಾಬ್ ಅಂಗಡಿಯವನ ಯಡವಟ್ಟಿನಿಂದಾಗಿ ಸಿಲಿಕಾನ್ ಸಿಟಿಯಲ್ಲಿ ದೊಡ್ಡ ಅನಾಹುತವೇ ನಡೆದಿದ್ದು, ಒಂದು ಆಟೋ, 6 ಬೈಕ್ ಗಳು ಹೊತ್ತಿ ಉರಿದಿರುವ ಘಟನೆ ನಡೆದಿದೆ.
ಈ ಘಟನೆ ವಿವೇಕನಗರದ ಈಜಿಪುರದಲ್ಲಿ ನಡೆದಿದೆ. ಸೆಪ್ಟೆಂಬರ್ 12 ರಂದು ರಾತ್ರಿ ವೇಳೆ ಈಜಿಪುರ ರಸ್ತೆಯ ಅಕ್ಕಪಕ್ಕದಲ್ಲಿ ಹೋಟೆಲ್ ಗಳು ಕಾರ್ಯ ನಿರ್ವಹಿಸುತ್ತಿದ್ದವು. ಈ ವೇಳೆ ಕಬಾಬ್ ಅಂಗಡಿಯಾತ ಸಿಲಿಂಡರ್ ಖಾಲಿಯಾಗಿದೆ ಎಂದು ಬೇರೆ ಸಿಲಿಂಡರ್ ಬದಲಾಯಿಸಲು ಮುಂದಾಗಿದ್ದಾನೆ. ಆಗ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಗಾಬರಿಯಾದ ಆತ ಸಿಲಿಂಡರ್ ನ್ನು ರಸ್ತೆಗೆ ತಳ್ಳಿದ್ದಾನೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ನಿಂತಿದ್ದ ಆಟೋಗೆ ಮೊದಲು ಬೆಂಕಿ ತಗುಲಿದರೆ, ಅದೇ ಬೆಂಕಿ ರಸ್ತೆ ಪಕ್ಕ ಪಾರ್ಕ್ ಮಾಡಿದ್ದ ಬೈಕ್ ಗಳಿಗೂ ಹೊತ್ತಿಕೊಂಡಿದೆ.
ಆಗ ಅಲ್ಲಿದ್ದ ಅಕ್ಕಪಕ್ಕದ ಅಂಗಡಿಯವರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಸತತ ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ಆರಿಸಿದ್ದಾರೆ. ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ಶ್ರಮದಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಆದರೆ, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ಘಟನೆ ಕುರಿತು ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.