ಲಖನೌ : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಉತ್ತರ ಪ್ರದೇಶದ ಮೇಲೆ ತುಂಬಾ ಭರವಸೆ ಇತ್ತು. ರೆಬೆಲ್ ಸಿಎಂ, ಖಟ್ಟರ್ ಹಿಂದು ಸಿಎಂ. ಎಲ್ಲಕ್ಕಿಂತ ಹೆಚ್ಚಾಗಿ ಮೋದಿ ನಂತರ ಬಿಜೆಪಿ ಸಾರಥ್ಯ ವಹಿಸಿಕೊಳ್ಳುವ ನಾಯಕರಲ್ಲಿ ಮುಂಚೂಣಿಯಲ್ಲಿದ್ದ ಯೋಗಿ ಆದಿತ್ಯನಾಥ್ ದೊಡ್ಡ ಕೊಡುಗೆ ನೀಡುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ಅಲ್ಲಿ ಬಿಜೆಪಿ ಮಕಾಡೆ ಮಲಗಿದ್ದು, ಇದು ಅಧಿಕಾರ ರಚಿಸಲು ಕಷ್ಟವಾಗುವಂತೆ ಮಾಡಿತು. ಹೀಗಾಗಿ ಪರಮಾಧಿಕಾರದಿಂದ ಎರಡು ಬಾರಿ ಮೆರೆದಿದ್ದ ಬಿಜೆಪಿ, ಎನ್ ಡಿಎ ಇತರ ಸದಸ್ಯರ ಕಪಿಮುಷ್ಠಿಯಲ್ಲಿ ಸಿಲುಕುವಂತಾಯಿತು. ಈಗ ವಿಷಯ ಅದಲ್ಲ, ಯಾಕೆ ಬಿಜೆಪಿ ಉತ್ತರ ಪ್ರದೇಶದಲ್ಲಿ ಸೋತಿತು? ಎಂಬುವುದು. ಸೋಲಿಗೆ ಕಾರಣ ಹುಡಕಲು ಸಿಎಂ ಯೋಗಿ ಆದಿತ್ಯನಾಥ್ ಸಮಿತಿಯೊಂದನ್ನು ರಚಿಸಿದ್ದರು. ಸದ್ಯ ಅದು ಹೊರ ಬಿದ್ದಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ನಿರೀಕ್ಷಿಸಲಾರದಷ್ಟು ಅತ್ಯಂತ ನಿರಾಶಾದಾಯಕ ಸೋಲು ಸಿಕ್ಕಿದೆ. ಹೀಗಾಗಿ ಇದರ ಹಿಂದಿನ ಕಾರಣ ತಿಳಿದುಕೊಳ್ಳಲು ಸಿಎಂ ಯೋಗಿ ಆದಿತ್ಯನಾಥ್ ಕಾರ್ಯ ಪಡೆ ರಚಿಸಿದ್ದರು. ಸದ್ಯ ಕಾರ್ಯಪಡೆ ತನ್ನ ವರದಿ ನೀಡಿದೆ.
ದೇಶದಲ್ಲಿಯೇ ಅತೀ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಈ ರಾಜ್ಯವು ಅಧಿಕಾರದಲ್ಲಿ ನಿರ್ಣಾಯಕ. ಹೀಗಾಗಿಯೇ ಎಲ್ಲ ಪಕ್ಷಗಳ ಕಣ್ಣು ಈ ರಾಜ್ಯದ ಮೇಲೆಯೇ ಇರುತ್ತದೆ. 2019ರ ಚುನಾವಣೆಯಲ್ಲಿ 62 ಸ್ಥಾನಗಳಲ್ಲಿ ಬಿಜೆಪಿ ಇಲ್ಲಿ ಗೆದ್ದಿತ್ತು. ಆದರೆ, 2024ರ ಚುನಾವಣೆಯಲ್ಲಿ ಬಿಜೆಪಿ ಕೇವಲ 33 ಸ್ಥಾನ ಮಾತ್ರ ಗೆದ್ದಿದೆ. ಈಗ ಬಿಜೆಪಿಯ ಓವರ್ ಕಾನ್ಫಿಡೆನ್ಸ್ ಇದಕ್ಕೆ ಪೆಟ್ಟು ನೀಡಿತಾ? ಅಥವಾ ಬೇರಾವ ಶಕ್ತಿ ಬಿಜೆಪಿಯನ್ನು ಎದುರಿಸಿತಾ ಎಂಬ ಚರ್ಚೆ ಶುರುವಾಗಿದೆ.

2019ರ ಚುನಾವಣೆಯಲ್ಲಿ ಕೇವಲ ಐದು ಸ್ಥಾನ ಗೆದ್ದಿದ್ದ ಸಮಾಜವಾದಿ ಪಕ್ಷ ಈ ಬಾರಿಯ ಚುನಾವಣೆಯಲ್ಲಿ 37 ಸ್ಥಾನ ಗೆದ್ದಿದೆ. ಹಿಂದೆ ಒಂದು ಸ್ಥಾನವನ್ನು ಮಾತ್ರ ಗೆದ್ದಿದ್ದ ಕಾಂಗ್ರೆಸ್, ಈ ಬಾರಿ 6 ಸ್ಥಾನದಲ್ಲಿ ಗೆಲುವು ಕಂಡಿದೆ. 2019ರ ಚುನಾವಣೆಯಲ್ಲಿ ಹತ್ತು ಸ್ಥಾನದಲ್ಲಿ ಗೆದ್ದಿದ್ದ ಬಹುಜನ ಸಮಾಜಪಕ್ಷ ಒಂದೂ ಸ್ಥಾನ ಗೆದ್ದಿಲ್ಲ.
ಹೀಗಾಗಿಯೇ ಬಿಜೆಪಿ ಸೋಲಿನ ಆತ್ಮಶೋಧನೆ ನಡೆಸುತ್ತಿದೆ. ಏಕೆಂದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾದರೆ, ದೇಶದ ತುಂಬೆಲ್ಲ ಹಿನ್ನಡೆಯಾದಂತೆಯೇ ಸರಿ. ಹೀಗಾಗಿ ಉತ್ತರ ಪ್ರದೇಶದ ಸೋಲಿನ ತಳಮಳ ಬಿಜೆಪಿಯಲ್ಲಿ ಇನ್ನೂ ಕಡಿಮೆಯಾಗಿಲ್ಲ.
ಬಿಜೆಪಿ ರಚಿಸಿದ ಸೋಲಿನ ಸತ್ಯಶೋಧನೆ ಕಾರ್ಯಪಡೆ ವರದಿಯಲ್ಲಿ ಪ್ರಮುಖವಾಗಿ ಬಿಜೆಪಿಗೆ ಸೋಲಿಗೆ 6 ಕಾರಣಗಳನ್ನು ನೀಡಿದೆ. ಪ್ರಮುಖವಾಗಿ, ಆಂತರಿಕ ಭಿನ್ನಾಭಿಪ್ರಾಯಗಳೇ ಬಿಜೆಪಿ ಸೋಲಿಗೆ ಕಾರಣ ಎಂದು ಸ್ಪಷ್ಟವಾಗಿದೆ ಹೇಳಿದೆ.
ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯೆ ಹೊಂದಾಣಿಕೆ ಕೊರತೆ ಇತ್ತು. ಹೀಗಾಗಿಯೇ ಹಿಂದುತ್ವಕ್ಕೆ ಹೆಚ್ಚು ಬೆಲೆ ಇದ್ದ ಅಯೋಧ್ಯೆ ಕ್ಷೇತ್ರವನ್ನು ಹೊಂದಿರುವ ಫೈಜಾಬಾದ್, ಹಿಂದೂಗಳ ಪವಿತ್ರ ಸ್ಥಳ ಪ್ರಯಾಗ (ಅಲಹಾಬಾದ್), ಸೀತಾಪುರ ಕ್ಷೇತ್ರದಲ್ಲಿ ಮತ್ತು ಅಮೇಠಿಯಲ್ಲೂ ಬಿಜೆಪಿಗೆ ಸೋಲಾಗಿದೆ. ವರದಿಯಲ್ಲಿ ಉಲ್ಲೇಖವಾಗಿರುವುದನ್ನು ಹೇಳುವುದಾದರೆ, ಟಿಕೆಟ್ ಹಂಚಿಕೆ ವಿಚಾರದಲ್ಲಿ ದೆಹಲಿ ಟೀಂ ಮತ್ತು ಉತ್ತರ ಪ್ರದೇಶದ ಬಿಜೆಪಿ ಘಟಕಗಳ ನಡುವೆ ಹೊಂದಾಣಿಕೆ ಇರಲಿಲ್ಲ. ಇದು ಪ್ರಮುಖವಾಗಿ, ಇಂಡಿಯಾ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದ್ದ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಸೋಲಾಗುವಂತಾಯಿತು.
ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಹಲವೆಡೆ ಸಾಕಷ್ಟು ವಿರೋಧಗಳು ವ್ಯಕ್ತವಾದರು. ಹೀಗಾಗಿ ಅಲ್ಲಿನ ಸ್ಥಳೀಯ ಜಿಲ್ಲಾ ಬಿಜೆಪಿ ಘಟಕದಲ್ಲಿನ ಅಸಹಕಾರವೂ ಪಕ್ಷದ ಸೋಲಿಗೆ ಕಾರಣವಾಯಿತು. ಪ್ರಚಾರದ ವೇಳೆ ನಿರೀಕ್ಷಿತ ಸಹಕಾರ ಸಿಗಲಿಲ್ಲ. ಇದು ವಿರೋಧಿಗಳು ಗೆಲ್ಲುವುದಕ್ಕೆ ದಾರಿ ಮಾಡಿಕೊಟ್ಟಿತು.
ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಹಲವು ದಶಕಗಳಿಂದಲೂ ತನ್ನದೆಯಾದ ವೋಟ್ ಬ್ಯಾಂಕ್ ನ್ನು ದಶಕಗಳಿಂದಲೂ ಹೊಂದಿದೆ. ಹಿಂದಿನ ಚುನಾವಣೆಯಲ್ಲಿ ಈ ಪಕ್ಷ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೇ ಇದಕ್ಕೆ ಸಾಕ್ಷಿ. ಆದರೆ, ಈ ಚುನಾವಣೆಯಲ್ಲಿ ಬಿಎಸ್ ಪಿ ಪಕ್ಷದ ಮತಗಳು ಸಮಾಜವಾದಿ ಪಕ್ಷದತ್ತು ವಾಲಿದ್ದೂ ಹಲವೆಡೆ ಬಿಜೆಪಿ ಸೋಲಿಕೆ ಕಾರಣವಾಗುವಂತಾಯಿತು.
ಕೇಂದ್ರ ಸಚಿವರು ಮತ್ತು ರಾಜ್ಯಸಭಾ ಸದಸ್ಯರಾಗಿರುವ ಪರ್ಶೋತ್ತಮ್ ರೂಪಾಲಾ ನೀಡಿದ ಹೇಳಿಕೆ ಬಿಜೆಪಿಗೆ ಮುಳುವಾಗಿದೆ. ಉತ್ತರ ಪ್ರದೇಶವನ್ನು ಈ ಹಿಂದೆ ಆಳಿದ ರಾಜ ಮನೆತನಗಳು ಬ್ರಿಟಿಷರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿತ್ತು ಎನ್ನುವ ಹೇಳಿಕೆ ಠಾಕೂರ್, ರಜಪೂತ್, ಕ್ಷತ್ರಿಯ ಸಮುದಾಯದ ಕೋಪಕ್ಕೆ ಕಾರಣವಾಗಿತ್ತು. ಇದು ಕೂಡ ಬಿಜೆಪಿಗೆ ದೊಡ್ಡ ಪೆಟ್ಟು ನೀಡಿತು.
ಬಿಜೆಪಿ ಅಧಿಕಾರಕ್ಕೆ ಬಂದರೆ, ಸಂವಿಧಾನದ ಬದಲಾವಣೆಯಾಗಲಿದೆ ಎನ್ನುವ ಇಂಡಿಯಾ ಮೈತ್ರಿಕೂಟದ ಪ್ರಚಾರ ಕೆಲವೊಂದು ಕಡೆ ಬಿಜೆಪಿಗೆ ಮುಳುವಾಯಿತು. ರಾಹುಲ್ ಗಾಂಧಿ, ಹೋದಲೆಲ್ಲಾ ಸಂವಿಧಾನದ ಪುಸ್ತಕವನ್ನು ಹಿಡಿದು ಪ್ರಚಾರ ಮಾಡುತ್ತಿದ್ದರು. ಇದು ಕೂಡ ಹಲವು ಮತಗಳು ವಿಭಜನೆಗೆ ಕಾರಣವಾದವು.
ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ವಾರ್ಷಿಕ ಒಂದು ಲಕ್ಷ ಮಹಿಳೆಯರಿಗೆ ನೀಡುವ ಗ್ಯಾರಂಟಿ ಸೇರಿದಂತೆ ಪ್ರತಿ ತಿಂಗಳು ಮಹಿಳೆಯರ ಅಕೌಂಟಿಗೆ 8,500 ರೂಪಾಯಿ ಟಕಾಟಕ್ ಬೀಳಲಿದೆ ಎಂಬ ರಾಹುಲ್ ಹೇಳಿಕೆ ಕೂಡ ಬಿಜೆಪಿಗೆ ಮುಳುವಾಗುವಂತಾಯಿತು.
ಇವೆಲ್ಲ ಕಾರಣಗಳಿಂದಲೇ ಉತ್ತರ ಪ್ರದೇಶದಲ್ಲಿ ಬಿಜೆಪಿ ಮಕಾಡೆ ಮಲಗುವಂತಾಯಿತು. ಪರಿಣಾಮ ಮೋದಿ ನೇತೃತ್ವದ ಬಿಜೆಪಿ ಎನ್ ಡಿಎ ಮೈತ್ರಿಯ ಇನ್ನಿತರ ಪಕ್ಷಗಳ ಕಪಿಮುಷ್ಠಿಗೆ ಸಿಲುಕಿ ಹಗ್ಗದ ಮೇಲೆ ನಡೆದಂತೆ ಅಧಿಕಾರಿ ಅನುಭವಿಸುವ ಅನಿವಾರ್ಯತೆ ಎದುರಿಸುವಂತಾಗಿ.