ಬೆಂಗಳೂರು: ಈಗ ರಾಜ್ಯದಲ್ಲಿ ಬೇಸಿಗೆ ರಜೆ (Summer Holidays) ಇದೆ. ಹೀಗಾಗಿ ಹಲವರು ತಮ್ಮ ತಮ್ಮ ಊರುಗಳತ್ತ ಮುಖ ಮಾಡಿರುತ್ತಾರೆ. ಹೀಗೆ ಹೋಗುವಾಗ ಮನೆಯಲ್ಲಿಟ್ಟಿರುವ ಚಿನ್ನಾಭರಣ, ಹಣ ಸೇರಿದಂತೆ ಮತ್ತಿತರ ವಸ್ತುಗಳ ಬಗ್ಗೆ ಎಚ್ಚರಿಕೆ ಇರಲಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ರಜೆ ಅಷ್ಟೇ ಅಲ್ಲ, ಯಾವುದೇ ಸಂದರ್ಭದಲ್ಲೂ ಹೊರಗೆ ಹೋಗುವವರು ಈ ಸುರಕ್ಷತೆ ಗಮನಿಸಿ ಎಂದಿದ್ದಾರೆ.
ಬೆಂಗಳೂರು (Bengaluru) ನಿವಾಸಿಗಳು ಮನೆಯ ಭದ್ರತೆ ಕುರಿತು ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಸಲಹೆ ನೀಡಿದ್ದಾರೆ. ಸಾರ್ವಜನಿಕರ ಸುರಕ್ಷತೆ ಬಗ್ಗೆ ಹಲವಾರು ಸಲಹೆಗಳನ್ನು ನೀಡಿದ್ದಾರೆ. ಮನೆಗೆ ಬೇಗ ಹಾಕಿ ಊರಿಗೆ ಅಥವಾ ಪ್ರವಾಸಕ್ಕೆ ತೆರಳುವ ಮುನ್ನ ಬೆಂಗಳೂರು ನಿವಾಸಿಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ದೀರ್ಘ ಅವಧಿಗೆ ಪ್ರವಾಸ ತೆರಳುವವರು ಮನೆಯಲ್ಲಿ ಬೆಳೆಬಾಳುವ ವಸ್ತುಗಳನ್ನು ಇಡಬೇಡಿ.
ಹಾಗಿದ್ದರೆ ಬ್ಯಾಂಕ್ ಅಥವಾ ಲಾಕರ್ ಗಳಲ್ಲಿ ಇಡಬೇಕು. ಗುಣಮಟ್ಟದ ಬೀಗ ಅಳವಡಿಸಬೇಕು. ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಿ. ಬೀಗದ ಕೀಯನ್ನು ಮನೆ ಪಕ್ಕದಲ್ಲಿ ಎಲ್ಲೋ ಇಟ್ಟು ಹೋಗುವ ಅಭ್ಯಾಸ ಬೇಡ. ಹೆಚ್ಚು ದಿನ ಪ್ರವಾಸ ಹೋಗುವುದಿದ್ದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ತೆರಳಿ ಎಂದು ಸಲಹೆ ನೀಡಿದ್ದಾರೆ.
ಕಳ್ಳರು ಮನೆಯಲ್ಲೂ ಇರಬಹುದು. ಹೀಗಾಗಿ ಮನೆಯ ಕೆಲಸದವರನ್ನು ನೇಮಿಸಿಕೊಳ್ಳುವ ಮುನ್ನ ಪೂರ್ವಾಪರವನ್ನು ಸರಿಯಾಗಿ ತಿಳಿದುಕೊಳ್ಳಿ. ಮನೆಯಲ್ಲಿ ಎಲ್ಲಿಂದರಲ್ಲಿ ಕೆಲಸದವರನ್ನು ಓಡಾಡಲು ಬಿಡಬೇಡಿ. ಬೆಲೆಬಾಳುವ ವಸ್ತುಗಳನ್ನು ಅವರಿಗೆ ಕಾಣುವಂತೆ ಇಡುವುದು, ಪ್ರದರ್ಶಿಸುವುದು ಬೇಡು ಎಂದು ಸಲಹೆ ನೀಡಿದ್ದಾರೆ.