ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕಳೆದ ಎರಡು ವರ್ಷಕ್ಕಿಂತ ಹೆಚ್ಚು ಅವಧಿಯಲ್ಲಿ 20ಕ್ಕೂ ಹೆಚ್ಚು ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ಹಿರಿಯ ನಾಯಕ ಮತ್ತು ಪರಿಷತ್ ಸದಸ್ಯ ಸಿ.ಟಿ. ರವಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮ ವರದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಮಾನವೀಯತೆಯ ಕೊರತೆಯಿಂದ ಸರ್ಕಾರಿ ನೌಕರರು ಆತ್ಮಹತ್ಯೆ ಮಾಡುವ ಪರಿಸ್ಥಿತಿ ಉಂಟಾಗಿದೆ. ಇದು ಸರಳ ಆತ್ಮಹತ್ಯೆಯಲ್ಲ, ಸರ್ಕಾರದ ಪ್ರಾಯೋಜಿತ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಿ.ಟಿ.ರವಿ ಅವರ ಪ್ರಕಾರ, ಸರ್ಕಾರಿ ನೌಕರರು ಸಂಬಳ ದೊರೆಯದಿರುವುದು, ಇಲಾಖೆಯ ನಿರ್ಲಕ್ಷ್ಯ, ಆಡಳಿತಾತ್ಮಕ ಅಸಮರ್ಪಕತೆ ಮತ್ತು ಮೇಲಧಿಕಾರಿಗಳ ಒತ್ತಡ ಇತ್ಯಾದಿ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಚಿವರು, ಶಾಸಕರು ಮತ್ತು ಅಧಿಕಾರಿಗಳ ಬೇಜವಾಬ್ದಾರಿಯ ವರ್ತನೆಯಿಂದ ನೌಕರರು ನಿರಾಶೆಗೆ ತಳ್ಳಲ್ಪಟ್ಟಿದ್ದಾರೆ. ಸಂಬಳವನ್ನೇ ಸಮಯಕ್ಕೆ ನೀಡದಿರುವ ಕಾರಣ ಹಲವರು ಡೆತ್ ನೋಟ್ ಬರೆದಿಟ್ಟು ಜೀವನ ಕೊನೆಗೊಳಿಸುತ್ತಿದ್ದಾರೆ. ಇದಕ್ಕೆ ಸರ್ಕಾರವೇ ಹೊಣೆಗಾರ ಎಂದು ಕಿಡಿಕಾರಿದ್ದಾರೆ.
ಸಿಎಂ ಕಣ್ಣು ಇದ್ದು ಕುರುಡರಂತೆ, ಕಿವಿ ಇದ್ದು ಕಿವುಡರಂತೆ, ಹೃದಯ ಇದ್ದು ಮಾನವೀಯತೆ ಸತ್ತಂತಾಗಿದೆ. ಸರ್ಕಾರಕ್ಕೆ ಹೃದಯ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಮಾನವೀಯತೆ ಸತ್ತಿರುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು. ಈ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮಾತ್ರ ಪ್ರಾಯಶ್ಚಿತ್ತ ಸಾಧ್ಯ. ಸರ್ಕಾರ ಹೃದಯಹೀನವಾಗಿ ವರ್ತಿಸುತ್ತಿದೆ. ಸರ್ಕಾರಿ ನೌಕರರ ಜೀವವನ್ನು ಕಾಳಜಿ ಇಲ್ಲದೆ ಬಲಿಯಾಗಿ ಬಳಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದಪ್ಪ ಚರ್ಮಕ್ಕೆ ಕೆಲವೊಮ್ಮೆ ಬಾರ್ಕೋಲಿನ ಚಡಿ ನಾಟುತ್ತೆ, ಕರೆಂಟ್ ಶಾಕ್ ಹೊಡೆದರೆ ಸಹ ನಾಟುತ್ತೆ. ಆದರೆ ಈ ಸರ್ಕಾರಕ್ಕೆ ಯಾವುದೇ ನೋವು ಆಗುತ್ತಿಲ್ಲ. ಇದು ದಪ್ಪ ಚರ್ಮವೋ ಅಥವಾ ಸತ್ತ ಚರ್ಮವೋ ಎಂಬ ಅನುಮಾನ ಬರುತ್ತಿದೆ. ಮಾನವೀಯತೆಯನ್ನು ಚಿಗುರಿಸುತ್ತಿಲ್ಲ ಎಂದು ತೀರ್ವವಾಗಿ ಟೀಕಿಸಿದ್ದಾರೆ.