ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ಝಳ ಮೇ ಅಂತ್ಯದವರೆಗೂ ಇರಲಿದೆ. ಅಲ್ಲದೇ, ಈ ವರ್ಷ ವಾಡಿಕೆಗಿಂತಲೂ ಬಿಸಲು ಹೆಚ್ಚಾಗಿರಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ, ಗದಗ, ಬೆಳಗಾವಿ, ಬಾಗಲಕೋಟೆಯಲ್ಲಿ ತಾಪಮಾನವು ವಾಡಿಕೆಗಿಂತ 2 ರಿಂದ 3 ಡಿ.ಸೆ ಅಧಿಕವಾಗಿರಲಿದೆ. ಗರಿಷ್ಠ ತಾಪಮಾನ 42 ಡಿ.ಸೆ ನಿಂದ 45 ಡಿ.ಸೆ ಗೆ ಏರಿಕೆಯಾಗುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ತಿಂಗಳಿನಿಂದ ಮೇ ವರೆಗೆ ರಾಜ್ಯದ ಕೆಲವೆಡೆ 2 ರಿಂದ 14 ದಿನಗಳು ಬಿಸಿ ಗಾಳಿ ದಿನಗಳಾಗಿರುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ವರ್ಷದ ಫೆಬ್ರವರಿ ತಿಂಗಳು 1901ರ ನಂತರದ ಅತ್ಯಂತ ತಾಪಮಾನದ ತಿಂಗಳಾಗಿದೆ. ದೇಶದ ಸರಾಸರಿ ತಾಪಮಾನದ 20.7 ಡಿ.ಸೆಲ್ಸಿಯಸ್‌ಗೆ ಹೋಲಿಸಿದರೆ 22.04 ಡಿ.ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. ದಕ್ಷಿಣ ರಾಜ್ಯಗಳಲ್ಲಿ ಈ ಬಾರಿ ಗರಿಷ್ಠ 33.23 ಡಿ.ಸೆ ಹಾಗೂ ಕನಿಷ್ಠ 20.28 ಡಿ.ಸೆ ದಾಖಲಾಗಿದೆ.