ಶಿವಮೊಗ್ಗ | ಶಿವಮೊಗ್ಗ ಜಿಲ್ಲೆಯ ಹೆಗ್ಗೋಡು ಹತ್ತಿರದ ಶಡ್ತಿಕೆರೆ ಸರ್ಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿಯ ಮೇಲೆ ಶಿಕ್ಷಕರು ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕ ಪ್ರಮೋದ ಭೀರಪ್ಪ ಸಣ್ಣಕ್ಕಿ ಅವರನ್ನು ಅಮಾನತುಗೊಳಿಸಿ ಜಿಲ್ಲೆಯ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ. ಎಸ್.ಆರ್ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ನ್ಯೂಸ್ ಬೀಟ್ ನಿರಂತರ ವರದಿಯ ನಂತರ ಎಚ್ಚೆತ್ತ ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರನ್ನು ವಿಚಾರಿಸಿದಾಗ, ಸುಶ್ರುತ ಎಂಬ ವಿದ್ಯಾರ್ಥಿಯು ಶಾಲೆಯಲ್ಲಿ ತನ್ನ ವಯಸ್ಸಿಗಿಂತ ಕಿರಿಯ ವಿದ್ಯಾರ್ಥಿಗಳಿಗೆ ಹೆದರಿಸುವುದು ಹಲವು ರೀತಿಯ ಕೆಟ್ಟ ವರ್ತನೆ ಮಾಡುವುದು ಹಾಗೂ ಶಾಲೆಯ ಹಣವನ್ನು ಕಳ್ಳತನ ಮಾಡಿರುವುದು ಶಿಕ್ಷಕರ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆ ಮಾ.12ರಂದು ಪ್ರಾರ್ಥನಾ ಸಮಯದ ನಂತರ ವಿದ್ಯಾರ್ಥಿಯನ್ನು ವಿಚಾರಿಸುವ ಸಮಯದಲ್ಲಿ ಶಿಕ್ಷಕರು ವಿದ್ಯಾರ್ಥಿಗೆ ಹಲ್ಲೆ ಮಾಡಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಶಿಕ್ಷಕರ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಫಾರಸ್ಸು ಮಾಡಿದ್ದಾರೆ.
ಈ ಹಿನ್ನೆಲೆ ನೌಕರರು ಓರ್ವ ಜವಾಬ್ದಾರಿಯುತ ಶಿಕ್ಷಕರಾಗಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸದೇ, ಕರ್ತವ್ಯ ಶ್ರದ್ಧೆಯನ್ನು ಹೊಂದದೇ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿದ್ದು, ಕರ್ನಾಟಕ ನಾಗರಿಕ ಸೇವಾ ನಡತೆಯನ್ನು ಉಲ್ಲಂಘಿಸಿರುವುದರಿಂದ, ಶಿಕ್ಷಕರು ಸೇವೆಯಲ್ಲಿ ಮುಂದುವರೆಸುವುದು ಸೂಕ್ತವಲ್ಲ ಎಂದು ಭಾವಿಸಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ : ಫೆಡರಲ್ ಬ್ಯಾಂಕ್‌ನಲ್ಲಿ ಹಲವು ಅಪ್ರೆಂಟಿಸ್ ಹುದ್ದೆಗಳ ನೇಮಕ.. ಫ್ರೆಶರ್‌ಗಳಿಗೆ ಗುಡ್ ನ್ಯೂಸ್



















