ಮುಂಬೈ: ಅಮೆರಿಕ ಅಧ್ಯಕ್ಷರ ಸುಂಕ ಸಮರವು ಉದ್ಯಮ ದೈತ್ಯ ಆಪಲ್ ಗೂ ತಟ್ಟಿದೆ. ಶೀಘ್ರವೇ ವಿದೇಶಗಳಿಂದ ಆಮದಾಗುವ ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಇದೊಂದು ಹೇಳಿಕೆ ಆಪಲ್ ಕಂಪನಿಯನ್ನು ಇನ್ನಿಲ್ಲದಂತೆ ಆತಂಕಕ್ಕೀಡು ಮಾಡಿದೆ. ಹೀಗಾಗಿಯೇ ರಾತ್ರೋ ರಾತ್ರಿ ಭಾರತದಿಂದ 5 ಕಾರ್ಗೋ ವಿಮಾನಗಳಲ್ಲಿ ಅಪಾರ ಪ್ರಮಾಣದ ಆಪಲ್ ಉತ್ಪನ್ನಗಳನ್ನು ಅಮೆರಿಕಗೆ ಸಾಗಿಸಲಾಗಿದೆ. ಆಪಲ್ ಫೋನ್, ಟ್ಯಾಬ್, ಲ್ಯಾಪ್ ಟಾಪ್ ಸೇರಿದಂತೆ ಹತ್ತಾರು ಉತ್ಪನ್ನಗಳನ್ನು ಮರಳಿ ತರಿಸಿಕೊಳ್ಳಲಾಗಿದೆ. ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ. 26ರಷ್ಟು ತೆರಿಗೆ ಹೇರುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಹೀಗಾಗಿ ಮುಂದಿನ ದಿನಗಳಲ್ಲಿ ಬಾರತದಲ್ಲಿ ಸಿದ್ಧವಾಗಿರುವ ತನ್ನ ಸಂಸ್ಥೆ ಉತ್ಪನ್ನಗಳನ್ನು ಹೆಚ್ಚಿನ ಸುಂಕ ನೀಡಿ ಅಮೆರಿಕಾಗೆ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇದರ ಪರಿಣಾಮವಾಗಿಯೇ ಆಪಲ್ ದಿಢೀರ್ ಆಗಿ ಭಾರತದಲ್ಲಿ ಉತ್ಪಾದನೆಯಾಗುವ ತನ್ನ ಕಂಪನಿಯ ಎಲ್ಲ ಉತ್ಪನ್ನಗಳನ್ನು ಏರ್ ಲಿಫ್ಟ್ ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಪಲ್ ತನ್ನ ಯಾವ ಉತ್ಪನ್ನಗಳ ಬೆಲೆ ಏರಿಕೆ ಮಾಡುವ ಪರಿಸ್ಥಿತಿಯಲ್ಲಿಲ್ಲ. ಹೀಗಾಗಿ ಅಮೆರಿಕ ಹೊರತಾಗಿ ವಿದೇಶಗಳಲ್ಲಿ ಸಿದ್ಧವಾಗುವ ತನ್ನ ಉತ್ಪನ್ನಗಳನ್ನ ತುರ್ತು ಆದ್ಯತೆ ಮೇರೆಗೆ ಅಮೆರಿಕಗೆ ಮರಳಿ ತರಿಸಿಕೊಳ್ಳುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಂದು ನಿರ್ಧಾರ ಈಗ ಇಡೀ ವಿಶ್ವದ ನಿದ್ದೆಗೆಡಿಸಿದೆ. ಘಟಾನುಘಟಿ ಸಂಸ್ಥೆಗಳು ಕೂಡ ನಡುಗುವಂತಾಗಿದೆ.