ಕನ್ನಡದ ಜನಪ್ರಿಯ ಶೋ ಬಿಗ್ ಬಾಸ್ ಸೀಸನ್ ಗೆ ದಿನಗಣನೆ ಆರಂಭವಾಗಿದೆ. ಬಿಗ್ ಬಾಸ್ ಸೀಸನ್- 11 ಸದ್ಯದಲ್ಲೇ ಆರಂಭವಾಗಲಿದೆ. ಕಿಚ್ಚ ಮತ್ತೊಮ್ಮೆ ಸದ್ದು ಮಾಡಲು ಸಜ್ಜಾಗಿದ್ದಾರೆ.
ಈಗ ಕಿಚ್ಚ ಸುದೀಪ್ ಇರುವ ಪ್ರೋಮೊ ಬಿಡುಗಡೆಯಾಗಿದ್ದು, ಅದರಲ್ಲಿ ಸ್ವರ್ಗ ಮತ್ತು ನರಕದ ಕತೆ ಹೇಳಿದ್ದಾರೆ. ಆ ಮೂಲಕ ಬಿಗ್ಬಾಸ್ ಮನೆ ಈ ಬಾರಿ ಹೇಗಿರಲಿದೆ ಎಂಬ ಸಣ್ಣ ಸುಳಿವನ್ನು ಅವರು ನೀಡಿದ್ದಾರೆ.
ಪ್ರೋಮೋದ ಆರಂಭದಲ್ಲಿಯೇ ಕೆಲವು ಯುವಕ-ಯುವತಿಯರು ಸ್ವರ್ಗದಲ್ಲಿ ಡೈನಿಂಗ್ ಟೇಬಲ್ ಮೇಲೆ ಕುಳಿತು ಖುಷಿಯಿಂದ ಆಹಾರ ಸೇವಿಸುತ್ತಿದ್ದಾರೆ. ಅದೇ ವಿಡಿಯೋ ಮುಂದುವರೆದರೆ ನರಕದಂತೆ ಕಾಣುವ ಭೀಕರ ಪ್ರದೇಶದಲ್ಲಿ ತಟ್ಟೆಯಲ್ಲಿ ಗಂಜಿ ಕುಡಿಯುತ್ತಿದ್ದಾರೆ. ಬೆಂಕಿಯ ಕುಲುಮೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸುದೀಪ್, ಸ್ವರ್ಗದಲ್ಲಿರುವವರು, ನರಕದಲ್ಲಿರುತ್ತಾರೆ ನರಕದಲ್ಲಿರುವವರು ಸ್ವರ್ಗದಲ್ಲಿರುತ್ತಾರೆ ಎಂದು ಬಿಗ್ ಬಾಸ್ ಶೈಲಿಯಲ್ಲಿ ಸ್ವರ್ಗ ನರಕದ ಜೀವನದ ಬಗ್ಗೆ ಮಾತನಾಡಿದ್ದಾರೆ.
ಯಾರು ಸ್ನೇಹಿತರಾಗುತ್ತಾರೆ ಎಂದು ನಂಬಿರುತ್ತೇವೆಯೋ ಅವರೇ ಬೆನ್ನಿಗೆ ಚೂರಿ ಹಾಕಬಹುದು. ಯಾರು ಚೂರಿ ಹಾಕುತ್ತಾರೆ ಎಂದುಕೊಂಡಿರುತ್ತೇವೆಯೋ ಅವರೇ ಸ್ನೇಹಿತರೂ ಆಗಬಹುದು ಎಂದು ಕಿಚ್ಚ ಡೈಲಾಗ್ ಹೊಡೆದಿದ್ದಾರೆ. ಆ ಮೂಲಕ ಬಿಗ್ ಬಾಸ್ ಮನೆಯಲ್ಲಿ ಯಾವ ಸಂಬಂಧವೂ ಶಾಶ್ವತವಲ್ಲ ಎಂದು ಸಹ ಹೇಳಿದ್ದಾರೆ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಶೋ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಿದ್ದಾರೆ. ಬಿಗ್ ಬಾಸ್ ಶೋ ಸೆಪ್ಟೆಂಬರ್ 29 ರಿಂದ ಆರಂಭವಾಗಲಿದೆ.