ಕಳೆದ 10 ವರ್ಷಗಳ ಹಿಂದೆ ಕಾಂತರಾಜು ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಆಯೋಗವು ಜಾತಿಗಣತಿಯನ್ನು ಮಾಡಿದ್ದು, ಇತ್ತೀಚಿಗೆ ಆ ಆಯೋಗ ತನ್ನ ವರದಿಯನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಿತ್ತು. ವರದಿ ಸರ್ಕಾರಕ್ಕೆ ಹಸ್ತಾಂತರ ಆಗುತ್ತಿದ್ದಂತೆ ವರದಿಯ ಬಗ್ಗೆ ಪರ ವಿರೋಧದ ಚರ್ಚೆಗಳು ಆರಂಭಗೊಂಡಿದ್ದವು. ಇದೀಗ ಆ ವರದಿಯ ಸಹವಾಸವೇ ಬೇಡ ಎಂಬ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಿದೆ.
ಹೌದು, ಚರ್ಚಗೆ ಕಾರಣವಾಗಿದ್ದ ಕಾಂತರಾಜು ಅವರ ವರದಿಯನ್ನು ಕೈ ಬಿಟ್ಟು ಹೊಸದೊಂದು ಸಮಿತಿ ರಚಿಸಿ, ಆ ಸಮಿತಿಯ ಮೂಲಕವೇ ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿದ್ದಾರೆ. ಹಾಗಾದರೆ, ಕಳೆದ ಬಾರಿಯ ವರದಿಯ ಏನಾಗುತ್ತದೆ ? ಈಗ ಆಗುವ ಸಮೀಕ್ಷೆಗೆ ಸಮಗ್ರವಾಗಿ ಸಮರ್ಪಕವಾಗಿ ನಡೆಯುತ್ತಾ? ಎಂಬ ಚರ್ಚೆಗಳು ಇದೀಗ ಶುರುವಾಗಿದೆ.
ಕಾಂತರಾಜು ಅವರ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿ, ಬರೋಬ್ಬರಿ ಎಂಟ್ಹತ್ತು ವರ್ಷಗಳ ಬಳಿಕ ತನ್ನ ಜಾತಿಗಣತಿಯ ವರದಿಯನ್ನು ಸರ್ಕಾರಕ್ಕೆ ಇತ್ತೀಚಿಗೆ ಹಸ್ತಾಂತರ ಮಾಡಿದೆ. ರಾಜ್ಯದಲ್ಲಿ 10 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಹೀಗಾಗಿಯೇ, ಕಾಂತರಾಜು ವರದಿಯನ್ನು ಅನುಷ್ಠಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಮುಂದಿಟ್ಟುಕೊಂಡು ಸಿಎಂ ಸಿದ್ಧರಾಮಯ್ಯ “ಮಧುಸೂದನ್ ನಾಯ್ಕ್” ಅವರ ನೇತೃತ್ವದ ಹೊಸ ಆಯೋಗವನ್ನು ರಚಿಸಿದ್ದಾರೆ. ಈ ಆಯೋಗವು ಬರುವ ಡಿಸೆಂಬರ್ ಒಳಗಾಗಿ, ಸಮೀಕ್ಷೆ ಮುಕ್ತಾಯಗೊಳಿಸಲು ಸೂಚಿಸಲಾಗಿದ್ದು, ಸಮೀಕ್ಷೆಗಾಗಿ ಸರ್ಕಾರ ಬರೋಬ್ಬರಿ 420 ಕೋಟಿ ರೂಪಾಯಿಗಳನ್ನು ಮೀಸಲಾಗಿಟ್ಟಿದೆ.
ಇದರ ಬಗ್ಗೆ ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಮಾಹಿತಿ ನೀಡಿದ್ದು, ಸರ್ಕಾರಿ ಶಾಲೆಯ ಶಿಕ್ಷಕರುಗಳು ಹಾಗೂ ಆಶಾ ಕಾರ್ಯಕರ್ತರೆಯನ್ನು ಈ ಸಮೀಕ್ಷೆಯ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದಿದ್ದಾರೆ. ರಾಜ್ಯದಲ್ಲಿ 7 ಕೋಟಿಗೂ ಅಧಿಕ ಜನಸಂಖ್ಯೆಯಿದ್ದು, 1.75 ಲಕ್ಷ ಶಿಕ್ಷಕರುಗಳು ಸಮೀಕ್ಷೆಯನ್ನು ನಡೆಸಲಿದ್ದಾರೆ. ಇವರಿಗೆ ಭತ್ಯೆಯ ರೂಪದಲ್ಲಿ ಕೊಡುವ ಹಣವೇ 325 ಕೋಟಿಯಷ್ಟಾಗುತ್ತದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ದಸರಾ ಹಬ್ಬದ ರಜೆಯ ಸಂದರ್ಭದಲ್ಲಿ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದ್ದು, ಶಿಕ್ಷಕರಿಗೆ ಸಮೀಕ್ಷೆಯ ಬಗ್ಗೆ ತರಬೇತಿಯನ್ನು ಸಹ ನೀಡಲಾಗುತ್ತದೆ ಎನ್ನಲಾಗಿದೆ.
ಇನ್ನು ಸರ್ಕಾರ ಸಮೀಕ್ಷೆಯ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆಯನ್ನು ತೆರೆದಿದ್ದು, 8050770004 ಗೆ ಯಾರೂ ಬೇಕಾದರು ಕರೆ ಮಾಡಿ ಮಾಹಿತಿ ತೆಗೆದುಕೊಳ್ಳಬಹುದು ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಇದೆಲ್ಲಾ ಒಂದು ಕಡೆ ಇರಲಿ. ರಾಜ್ಯದಲ್ಲಿ ಈ ಹಿಂದೆ ಸರ್ಕಾರವೇ ಹಣ ಖರ್ಚು ಮಾಡಿ ಮಾಡಿಸಿದ ಸಮೀಕ್ಷೆಯ ಕಥೆಯೇನು? ಇನ್ನು ಇದಕ್ಕಾಗಿ 420 ಕೋಟಿ ರೂಪಾಯಿ ಜನರ ತೆರಿಗೆ ಹಣ ಪೋಲಾಗುತ್ತಿದೆ. ಈ ಹಿಂದೆ 165 ಕೋಟಿ ರೂಪಾಯಿ ಖರ್ಚು ಮಾಡಿದ ಸಮೀಕ್ಷೆಯನ್ನೇ ಸರ್ಕಾರ ಒಪ್ಪಲಿಲ್ಲ. ಈಗ ಈ ಸಮೀಕ್ಷೆ ಕಥೆ ಎಂಬುದಕ್ಕೆ ಉತ್ತರ ಸಿಗಬೇಕಿದೆ.
ನ್ಯೂಸ್ ಬ್ಯೂರೋ, ಕರ್ನಾಟಕ ನ್ಯೂಸ್ ಬೀಟ್ ಬೆಂಗಳೂರು



















