ಮುಂಬೈ: ಭಾರತೀಯ ಸುಗಮ ಸಂಗೀತ ಮತ್ತು ಚಿತ್ರ ಸಂಗೀತದ ದಂತಕಥೆ ಆಶಾ ಭೋಂಸ್ಲೆ ಅವರು ಇಂದು(ಭಾನುವಾರ) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಹೃದಯ ಮತ್ತು ಉಸಿರಾಟದ ಸಮಸ್ಯೆಯಿಂದಾಗಿ ಶನಿವಾರವಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಿಸದೇ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಆನಂದ್ ಖಚಿತಪಡಿಸಿದ್ದಾರೆ. ಸೋಮವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

9ನೇ ವಯಸ್ಸಿನಲ್ಲೇ ಆರಂಭವಾದ ಸಂಗೀತಯಾನ
1933ರಲ್ಲಿ ಸುಪ್ರಸಿದ್ಧ ಮಂಗೇಶ್ಕರ್ ಕುಟುಂಬದಲ್ಲಿ ಜನಿಸಿದ ಆಶಾ ಅವರು ತಮ್ಮ 9ನೇ ವಯಸ್ಸಿನಲ್ಲೇ ವೃತ್ತಿಪರ ಗಾಯನ ಆರಂಭಿಸಿದರು. 1943ರಲ್ಲಿ ಅವರ ಮೊದಲ ಚಲನಚಿತ್ರ ಗೀತೆ ಧ್ವನಿಮುದ್ರಣವಾಯಿತು. ಅಂದಿನಿಂದ ಸುಮಾರು ಎಂಟು ದಶಕಗಳ ಕಾಲ ಸಾವಿರಾರು ಹಾಡುಗಳಿಗೆ ಧ್ವನಿಯಾದ ಅವರು, ವಿಶ್ವದ ಅತ್ಯಂತ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ವಿಶಿಷ್ಟ ಶೈಲಿ ಮತ್ತು ಬಹುಮುಖ ಪ್ರತಿಭೆ
ಕೇವಲ ಕ್ಯಾಬರೆ ಅಥವಾ ಐಟಂ ಸಾಂಗ್‌ಗಳಿಗೆ ಸೀಮಿತವಾಗಿದ್ದ ಆಶಾ, ನಂತರದ ದಿನಗಳಲ್ಲಿ ‘ಉಮ್ರಾವ್ ಜಾನ್’ ನಂತಹ ಚಿತ್ರಗಳ ಮೂಲಕ ಘಜಲ್ ಗಾಯನದಲ್ಲೂ ಛಾಪು ಮೂಡಿಸಿದರು. ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ, ‘ಗಾನ ಕೋಗಿಲೆ’ ಲತಾ ಮಂಗೇಶ್ಕರ್ ಅವರ ಕಿರಿಯ ಸಹೋದರಿಯಾಗಿದ್ದ ಆಶಾ ಭೋಂಸ್ಲೆ ಅವರೂ ತಮ್ಮ ಗಾಯನದ ಮೂಲಕ ಮನೆಮಾತಾದರು.
7 ಬಾರಿ ಫಿಲ್ಮ್‌ಫೇರ್ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಮತ್ತು ಎರಡು ಬಾರಿ ರಾಷ್ಟ್ರ ಪ್ರಶಸ್ತಿಯನ್ನು (ದಿಲ್ ಚೀಜ್ ಕ್ಯಾ ಹೈ – ಉಮ್ರಾವ್ ಜಾನ್, ಮೇರಾ ಕುಚ್ ಸಾಮಾನ್ – ಇಜಾಜತ್) ಮುಡಿಗೇರಿಸಿಕೊಂಡಿದ್ದಾರೆ. ಒಪಿ ನಯ್ಯರ್, ಆರ್‌ಡಿ ಬರ್ಮನ್ ಅವರಂತಹ ದಿಗ್ಗಜ ಸಂಗೀತ ನಿರ್ದೇಶಕರ ಸಂಯೋಜನೆಯಲ್ಲಿ ಅವರು ನೀಡಿದ ಹಿಟ್ ಹಾಡುಗಳು ಇಂದಿಗೂ ಅಜರಾಮರ.

ವೈಯಕ್ತಿಕ ಜೀವನದ ಏರಿಳಿತ
ಆಶಾ ಅವರ ವೈಯಕ್ತಿಕ ಜೀವನ ಹಲವು ಸವಾಲುಗಳಿಂದ ಕೂಡಿತ್ತು. 16ನೇ ವಯಸ್ಸಿನಲ್ಲಿ ಗಣಪತ್‌ರಾವ್ ಭೋಂಸ್ಲೆ ಅವರೊಂದಿಗೆ ವಿವಾಹವಾಗಿ ನಂತರ ಬೇರ್ಪಟ್ಟರು. 1980ರಲ್ಲಿ ಖ್ಯಾತ ಸಂಗೀತ ನಿರ್ದೇಶಕ ರಾಹುಲ್ ದೇವ್ ಬರ್ಮನ್ (ಆರ್.ಡಿ. ಬರ್ಮನ್) ಅವರನ್ನು ವಿವಾಹವಾದರು. 1994ರಲ್ಲಿ ಆರ್.ಡಿ. ಬರ್ಮನ್ ನಿಧನರಾದರು. ಇತ್ತೀಚಿನ ವರ್ಷಗಳಲ್ಲಿ ಅವರ ಮೊಮ್ಮಗಳು ಜನೈ ಭೋಂಸ್ಲೆ ಅವರೊಂದಿಗೆ ಆಶಾ ಅವರು ವಾಸವಿದ್ದರು.
ಆಶಾ ಭೋಂಸ್ಲೆ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕದ ಒಂದು ಸುವರ್ಣ ಯುಗ ಅಂತ್ಯಗೊಂಡಂತಾಗಿದೆ.



















