ನವದೆಹಲಿ: ಆ ವ್ಯಕ್ತಿ 1995ರಿಂದ 2000ದವರೆಗೆ ಅಂದರೆ ಬರೋಬ್ಬರಿ 25 ವರ್ಷಗಳ ಕಾಲ ದೆಹಲಿಯ ಐಷಾರಾಮಿ ಐಟಿಸಿ ಹೋಟೆಲ್‌ನಲ್ಲಿ ವಾಚ್‌ಮನ್ ಆಗಿ ಸೇವೆ ಸಲ್ಲಿಸಿದ್ದರು. ಆದರೆ, ಒಂದು ಬಾರಿಯೂ ಆ ಹೋಟೆಲ್‌ನೊಳಕ್ಕೆ ಕಾಲಿಟ್ಟು ಊಟ ಸವಿಯುವ ಭಾಗ್ಯ ಮಾತ್ರ ದೊರೆತಿರಲಿಲ್ಲ.
ಈಗ 25 ವರ್ಷಗಳ ಬಳಿಕ ಅವರ ಮಗ ಅಪ್ಪನ ಆಸೆಯನ್ನು ಈಡೇರಿಸಿದ್ದಾನೆ. ಅಪ್ಪನನ್ನು ಅವರು ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದ ಅದೇ ಹೋಟೆಲಿಗೆ ಕರೆತಂದು, ಭರ್ಜರಿ ಭೋಜನವನ್ನು ಉಣಬಡಿಸಿದ್ದಾನೆ. ಇಂಥದ್ದೊಂದು ಭಾವನಾತ್ಮಕ ಗಳಿಗೆಯನ್ನು ಅವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೆಹಲಿ ಐಟಿಸಿಯಲ್ಲಿ ತಂದೆ-ತಾಯಿಯ ಜೊತೆಗೆ ಭೋಜನ ಸವಿಯುತ್ತಿರುವ ಫೋಟೋವನ್ನು ಯುವ ಖಗೋಳವಿಜ್ಞಾನಿ ಮಿಶ್ರಾ ಅವರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
“ನನ್ನ ಅಪ್ಪಾಜಿ ದೆಹಲಿಯ ಐಟಿಸಿಯಲ್ಲಿ 1995ರಿಂದ 2000ದವರೆಗೆ ಕಾವಲುಗಾರನಾಗಿ ಕೆಲಸ ಮಾಡಿದ್ದರು; ಇಂದು ಅವರನ್ನು ಅದೇ ಸ್ಥಳಕ್ಕೆ ಡಿನ್ನರ್‌ಗೆ ಕರೆದೊಯ್ಯುವ ಅವಕಾಶ ನನಗೆ ದೊರೆಯಿತು,” ಎಂದು ಮಿಶ್ರಾ ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದು, ಮಿಶ್ರಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ನನಗೆ ನೀವು ಯಾರೆಂದು ಗೊತ್ತಿಲ್ಲ. ಆದರೆ, ನಿಮ್ಮ ಈ ಸುಂದರವಾದ ಪೋಸ್ಟ್ ನೋಡಿ ಕಣ್ತುಂಬಿ ಬಂತು. ನಿಮ್ಮ ಕುಟುಂಬ ಸದಾ ಚೆನ್ನಾಗಿರಲಿ” ಎಂದು ಒಬ್ಬರು ಬರೆದರೆ, ಮತ್ತೊಬ್ಬರು “ಇದೊಂದು ಅತ್ಯುತ್ತಮ ಕಾರ್ಯ. ನಿಮ್ಮ ಸಾಧನೆಯನ್ನು ಸಂಭ್ರಮಿಸುವ ಅತ್ಯುತ್ತಮ ಮಾರ್ಗವೂ ಹೌದು” ಎಂದಿದ್ದಾರೆ.