ಹಸೀನಾ: ಬಾಂಗ್ಲಾ ಮಾಜಿ ಪ್ರಧಾನಿಯ ಆಡಿಯೋ ರಿಲೀಸ್
ನವದೆಹಲಿ: ಕಳೆದ ವರ್ಷದ ಆಗಸ್ಟ್ 5ರಂದು ಬಾಂಗ್ಲಾದೇಶದಲ್ಲಿ(Bangladesh) ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯ ಬಳಿಕ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ(Sheikh Hasina) ಅವರು, ಅಂದಿನ ತಮ್ಮ ಸ್ಥಿತಿಯನ್ನು ಹೇಳಿಕೊಂಡು ನೋವನ್ನು ಹೊರಹಾಕಿರುವ ಆಡಿಯೋವನ್ನು ಅವರ ಅವಾಮಿ ಲೀಗ್ ಪಕ್ಷ ಹಂಚಿಕೊಂಡಿದೆ. ಅದರಲ್ಲಿ 77 ವರ್ಷದ ಹಸೀನಾ ಅವರು ತಾವು ಮತ್ತು ತಮ್ಮ ಸಹೋದರಿ ಹೇಗೆ ಸಾವನ್ನು ಹಿಮ್ಮೆಟ್ಟಿಸಿ ಪರಾರಿಯಾದೆವು ಎಂಬುದನ್ನು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ರಾಜಕೀಯ ವಿರೋಧಿಗಳು ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದರು. ಆದರೆ ಆ ಭಗವಂತ ನನ್ನನ್ನು ರಕ್ಷಿಸಿದ್ದು, ಅವನಿಗೆ ಅನಂತಾನಂತ ಧನ್ಯವಾದಗಳು ಎಂದೂ ಹೇಳಿದ್ದಾರೆ.
ಕಳೆದ ವರ್ಷದ ಆಗಸ್ಟ್ 5ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ(resignation) ನೀಡಿದ ಬೆನ್ನಲ್ಲೇ ಅವರ ಬಂಗಲೆಯ ಮೇಲೆ ಉದ್ರಿಕ್ತ ಪ್ರತಿಭಟನಾಕಾರರ ಗುಂಪು ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಢಾಕಾದಿಂದ ಪರಾರಿಯಾದ ಹಸೀನಾ ಮತ್ತು ಸೋದರಿ ರೆಹಾನಾ ಭಾರತಕ್ಕೆ ಬಂದು ಇಲ್ಲಿಯೇ ನೆಲೆಸಿದ್ದಾರೆ.
“ಕೇವಲ 20-25 ನಿಮಿಷಗಳಲ್ಲಿ ನಾವು ಸಾವಿನ ದವಡೆಯಿಂದ ಪಾರಾದೆವು. ಆಗಸ್ಟ್ 21ರಂದು ನಡೆದ ಹತ್ಯೆಗಳ ನಡುವೆ ನಾನು ಬದುಕುಳಿದೆ (ಅಂದು ನಡೆದ ಗ್ರೆನೇಡ್ ದಾಳಿಯಲ್ಲಿ 24 ಮಂದಿ ಮೃತಪಟ್ಟಿದ್ದರು), ಕೋಟಲಿಪಾರಾದಲ್ಲಿ ಬಾಂಬ್ ದಾಳಿ (ಹಸೀನಾ ಭೇಟಿ ನೀಡಲಿದ್ದ ಕಾಲೇಜಿನಲ್ಲಿ ಬಾಂಬ್ ಪತ್ತೆಯಾಗಿತ್ತು) ನಡೆದಾಗ ನಾನು ಬದುಕುಳಿದೆ, ಆ.5ರಂದು ನನ್ನ ಬಂಗಲೆಗೆ ಜನರು ಮುತ್ತಿಕ್ಕಿದಾಗ ನಾನು ಬದುಕುಳಿದೆ. ಅಲ್ಲಾಹನ ಕೃಪೆಯೇ ನನ್ನನ್ನು ರಕ್ಷಿಸಿತು” ಎಂದು ಹಸೀನಾ ಬಾಂಗ್ಲಾ ಭಾಷೆಯಲ್ಲಿ ಹೇಳಿಕೊಂಡಿದ್ದಾರೆ.
“ವಿರೋಧಿಗಳು ನನ್ನನ್ನು ಕೊಲ್ಲಲು ಹೇಗೆ ಸಂಚು ರೂಪಿಸಿದ್ದರು ಎನ್ನುವುದನ್ನು ಇಡೀ ಜಗತ್ತೇ ನೋಡಿದೆ. ಆದರೂ ನಾನು ಬದುಕುಳಿದಿದ್ದೇನೆ ಎಂದರೆ, ನನ್ನಿಂದ ಇನ್ನೇನನ್ನೋ ಮಾಡಿಸಲು ಭಗವಂತ ಬಯಸುತ್ತಿದ್ದಾನೆ ಎಂದರ್ಥ. ನಾನು ಅತೀವ ನೋವನ್ನು ಅನುಭವಿಸುತ್ತಿದ್ದೇನೆ. ನನಗೀಗ ನನ್ನ ದೇಶವಿಲ್ಲ, ನನ್ನ ಮನೆಯಿಲ್ಲ, ಎಲ್ಲವೂ ಸುಟ್ಟು ಭಸ್ಮವಾಯಿತು” ಎಂದು ಹೇಳುತ್ತಲೇ ಹಸೀನಾ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಈ ವಾಯ್ಸ್ ನೋಟ್ ಅನ್ನು ಹಸೀನಾರ ಅವಾಮಿ ಲೀಗ್ ಪಕ್ಷ (Awami League Party) ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಶೇಖ್ ಹಸೀನಾರನ್ನು ಗಡಿಪಾರು ಮಾಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿತ್ತು. ಮನವಿ ಪತ್ರ ಬಂದಿರುವುದಾಗಿ ಭಾರತದ ವಿದೇಶಾಂಗ ಸಚಿವಾಲಯ ದೃಢಪಡಿಸಿತ್ತಾದರೂ, ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಅಲ್ಲದೆ, ಈ ವರ್ಷದ ಅಂತ್ಯದಲ್ಲಿ ಅಥವಾ 2026ರ ಆರಂಭದಲ್ಲಿ ಬಾಂಗ್ಲಾ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.