ಟೀಂ ಇಂಡಿಯಾ…ಅದಾಗಲೇ ಇಂಗ್ಲೆಂಡ್ ಪ್ರವಾಸದ ಹೆಬ್ಬಾಗಿಲಲ್ಲಿ ನಿಂತಿದೆ. ಒಂದೆಡೆ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ರು. ತಂಡದ ಬ್ಯಾಟಿಂಗ್ ಬಲಕ್ಕೆ ಹಿರಿಯ ವಿರಾಟ್ ಕೊಹ್ಲಿಯೇ ಆಧಾರ ಸ್ತಂಭದಂತಿದ್ರು. ಆದ್ರೆ ರಾತ್ರೋ ರಾತ್ರಿ ಅಲ್ಲೊಂದು ಅಚ್ಚರಿ ಬೆಳವಣಿಗೆ ನಡೆದು ಹೋಗಿತ್ತು. ಡ್ಯಾಷಿಂಗ್ ಬ್ಯಾಟರ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ರು. ಇನ್ಮುಂದೆ ವೈಟ್ ಜರ್ಸಿ ತೊಡದಿರೋ ಕೊಹ್ಲಿಯ ಈ ತುರ್ತು ನಿರ್ಧಾರದ ಹಿಂದಿನ ಕಾರಣವಾದ್ರು ಏನು. ಸಮಸ್ತ ಕೊಹ್ಲಿ ಬ್ರಿಗೇಡನ್ನು ಬಿಟ್ಟೂ ಬಿಡದೆ ಕಾಡ್ತಿರೋ ಏಕೈಕ ಪ್ರಶ್ನೆ ಅಂದ್ರೆ ಅದು ಕೊಹ್ಲಿಯ ನಿವೃತ್ತಿಗೆ ಒತ್ತಡವಿತ್ತಾ ಅನ್ನೋದು.
ಬಿಸಿಸಿಐ ನಿಲುವಿನಿಂದ ಬೇಸರಗೊಂಡ್ರಾ ಕೊಹ್ಲಿ
ಹಾಗೆ ನೋಡಿದ್ರೆ ಇಂಗ್ಲೆಂಡ್ ಪ್ರವಾಸಕ್ಕೆ ಹೊರಟಿರುವ ಟೀಂ ಇಂಡಿಯಾಗೆ ವಿರಾಟ್ ಅನುಭವ ಅಗತ್ಯ ಮತ್ತು ಅನಿವಾರ್ಯತೆ ಇತ್ತು. ರೋಹಿತ್ ಅನುಪಸ್ಥಿತಿಯಲ್ಲಿ ವಿರಾಟ್ ಪಾತ್ರ ಬಹಳ ಜವಾಬ್ದಾರಿಯುತ ಮತ್ತು ನಿರ್ಣಾಯಕವಾಗಿತ್ತು. ಆದ್ರೆ ಹಾಗಾಗಿಲ್ಲ. ನಿಜಕ್ಕೂ ತೆರೆಮರೆಯಲ್ಲಿ ನಡೆದ ಕೆಲ ಬೆಳವಣಿಗೆಗಳು ವಿರಾಟ್ ರ ನಿರ್ಧಾರಕ್ಕೆ ಬಿಸಿಸಿಐನ ನಿಲುವೇ ಕಾರಣ ಎನ್ನಲಾಗ್ತಿದೆ. ಒಂದು ಹಂತದಲ್ಲಿ ವಿರಾಟ್ ಮೇಲೆ ನಿವೃತ್ತಿಯ ವಿಪರೀತ ಒತ್ತಡವಿತ್ತು. ಆದ್ರೆ ದೆಹಲಿ ದಾಂಡಿಗ ಇಂಗ್ಲೆಂಡ್ ಪ್ರವಾಸದ ಬಳಿಕ ಈ ನಿರ್ಧಾರ ಮಾಡ್ತೀನಿ ಅಂದಿದ್ರು ಬಟ್, ಬಿಸಿಸಿಐ ಬಿಗ್ ಬಾಸ್ ಗಳು ಇದಕ್ಕೆ ಒಪ್ಪಲಿಲ್ಲ ಎನ್ನಲಾಗ್ತಿದೆ. ಹೀಗಾಗಿಯೇ ಕೊಹ್ಲಿ ದಿಢೀರ್ ಅಂತಾ ಬಿಳಿ ಜರ್ಸಿ ಕಳಚಿಟ್ಟು ಹೊರಟಿದ್ದಾರೆ.
ಯುವ ನಾಯಕತ್ವದಲ್ಲಿ ಕೊಹ್ಲಿಗೆ ಇರುಸು ಮುರುಸು
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದಲ್ಲಿ ಪ್ರಯೋಗ ಮಾಡಲು ಬಿಸಿಸಿಐ ತೀರ್ಮಾನಿಸಿತ್ತು. ಅದ್ರಲ್ಲೂ ರೋಹಿತ್ ರಿಂದ ತೆರವಾದ ಸ್ಥಾನಕ್ಕೆ ಯುವ ಆಟಗಾರನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಲಾಗಿದೆ. ಹಾಗಂತಾ ಆ ನಾಯಕನೊಟ್ಟಿಗೆ ವಿರಾಟ್ ಚಿಂತನೆ ಸರಿಹೊಂದೋದಿಲಲ್ಲ ಅನ್ನೋದು ಬಿಸಿಸಿಐ ಅಭಿಪ್ರಾಯ. ಹೀಗಾಗಿಯೇ ನಿವೃತ್ತಿ ಘೋಷಿಸಿಬಿಡಿ ಅನ್ನೋ ಫರ್ಮಾನು ಸಿಕ್ಕಿದೆ. ಆದ್ರೆ ಇದಕ್ಕೂ ಮುನ್ನ ತಮ್ಮ ಆಪ್ತ ಮಾಜಿ ಕೋಚ್, ರವಿಶಾಸ್ತ್ರಿಯವರನ್ನು ಭೇಟಿ ಮಾಡಿದ್ದ ಕೊಹ್ಲಿ ತಮಗಾದ ಅಪಮಾನವನ್ನು ವಿವರಿಸಿದ್ದಾರೆ. ಶಾಸ್ತ್ರಿ ಕೂಡಾ ಇಂಥಾ ವಾತಾವರಣದಲ್ಲಿ ಆಟ ಕಷ್ಟ ಅಂತಾ ಸೂಚಿಸಿದ್ದಾರೆ. ಹಾಗೆ ನೋಡಿದ್ರೆ ಕೊಹ್ಲಿಗೆ ತಂಡದ ಈಗಿನ ವಾತಾವರಣ, ಕೋಚ್ ಗಂಭೀರ್ ಜೊತೆಗಿನ ಶೀತಲ ಸಮರ ಮತ್ತು ಸಹಿಸಲಾಗದ ಕೆಲ ಬೆಳವಣಿಗಳು ನಿವೃತ್ತಿಯನ್ನು ಯೋಚಿಸುವಂತೆ ಮಾಡಿತ್ತು. ಹಾಗಾಗಿಯೇ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ರನ್ನ ಭೇಟಿ ಮಾಡಿದ್ದ ಕೊಹ್ಲಿ, ತಮ್ಮ ಮನದಲ್ಲಿದ್ದ ಪ್ರತಿ ನೋವನ್ನು ವಿವರಿಸಿದ್ರು. ಸಾಲದ್ದಕ್ಕೆ ನೀವು ಇರೂ ಅಂದ್ರೂ ನಾನೇನು ತಂಡದಲ್ಲಿ ಉಳಿಯೋದಿಲ್ಲ. ಬದಲಿಗೆ ಒಂದಷ್ಟು ಸಮಯ ತೆಗೆದುಕೊಂಡು ಗೌರವಯುತವಾಗಿ ಹೊರಹೋಗಣ ಅಂದುಕೊಂಡಿದ್ದೆ ಅನ್ನೋದನ್ನು ಮನವರಿಕೆ ಮಾಡಿದ್ದಾರೆ. ಒಟ್ಟಿನಲ್ಲಿ ಕೊಹ್ಲಿಯ ವಿದಾಯದ ಹಿಂದೆ ಬಿಸಿಸಿಐನ ಆ ಪ್ರಯೋಗ ಮನಸ್ಥಿತಿಯ ನೆರಳು ಸ್ಪಷ್ಟವಿದೆ. ಹಾಗಂತಾ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತದ ಪ್ರದರ್ಶನ ಕೊಹ್ಲಿಯ ಅನುಪಸ್ಥಿತಿಯ ಸತ್ಯ ದರ್ಶನ ಮಾಡಿಸಲಿದೆ.