ಇಟಾಲಿಯನ್ ಟೆನಿಸ್ ಆಟಗಾರ ಯಾನಿಕ್ ಸಿನ್ನರ್ ಪ್ರಸಕ್ತ ಸಾಲಿನ ಆಸ್ಟ್ರೇಲಿಯನ್ ಓಪನ್ ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ 2 ಗಂಟೆ 42 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಯಾನಿಕ್ ಸಿನ್ನರ್ ಅವರು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ (Alexander Zverev) ರನ್ನು 6-3, 7-6 (4), 6-3 ನೇರ ಸೆಟ್ ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಈ ಗೆಲುವಿನ ಮೂಲಕ ಹಾಲಿ ಚಾಂಪಿಯನ್ ಪಟ್ಟವನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅನಾರೋಗ್ಯದ ಮಧ್ಯೆಯೂ ಶ್ರೇಷ್ಠ ಪ್ರದರ್ಶನ ನೀಡಿದ ಯಾನಿಕ್ ಸಿನ್ನರ್, ಸತತ ಎರಡನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಗೆದ್ದಿರುವ ಯಾನಿಕ್ ಸಿನ್ನರ್ ಗೆ ಇದು ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ಕಳೆದ 13 ತಿಂಗಳುಗಳಲ್ಲಿ ಮೂರನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೂ ಮೊದಲು ಅವರು 2024 ರ ಯುಎಸ್ ಓಪನ್ ಮತ್ತು ಕಳೆದ ಬಾರಿಯ ಆಸ್ಟ್ರೇಲಿಯನ್ ಓಪನ್ ಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದರು. ವಿಶ್ವ ನಂ.2 ಅಲೆಕ್ಸಾಂಡರ್ ಜ್ವೆರೆವ್ ಮತ್ತೊಮ್ಮೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲುವಲ್ಲಿ ಎಡವಿದರು.
ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾದ ಅಲೆಕ್ಸಾಂಡರ್ ಜ್ವೆರೆವ್ 2015 ರಿಂದ ಗ್ರ್ಯಾಂಡ್ ಸ್ಲಾಮ್ ಆಡುತ್ತಿದ್ದು, 3 ಬಾರಿ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪ್ರತಿ ಬಾರಿಯೂ ಸೋಲು ಎದುರಿಸಿ, ನಿರಾಸೆ ಹೊಂದಿದ್ದಾರೆ.
ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ಯಾನಿಕ್ ಸಿನ್ನರ್ ಅವರು ಆಸ್ಟ್ರೇಲಿಯನ್ ಓಪನ್ ಇತಿಹಾಸದಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಂಡ 11 ನೇ ಆಟಗಾರ ಎಂಬ ಖ್ಯಾತಿ ಗಳಿಸಿದ್ದಾರೆ.