ಬೆಂಗಳೂರು: ಪ್ರತಿ ವರ್ಷ ಉತ್ತರ ಕರ್ನಾಟಕದ ಬೆಳಗಾವೀಲಿ ಅಧಿವೇಶನ ನಡಿತದ. ಸರಕಾರದ್ ಮಂದಿ ಕಾಟಾಚಾರಕ್ಕ ಅಂತ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡ್ತಾರ. ಉತ್ತರ ಕರ್ನಾಟಕವನ್ನ ನಾವ್ ಹಂಗ್ ಮಾಡ್ತೀವಿ, ಹಿಂಗ್ ಮಾಡ್ತೀವಿ ಅಂತ ವಿಮಾನ ಹತ್ತಿ ಬೆಂಗ್ಳೂರಿಗೆ ಹೋಕ್ಕಾರ. ಆದ್ರ, ಉತ್ತರ ಕರ್ನಾಟಕದ ಮಂದಿ ಮಾತ್ರ ಕಷ್ಟದಾಗ ದಿನ ದೂಡೋದು ತಪ್ಪಾಂಗಿಲ್ಲ. ಸದ್ಯ ಬೆಳಗಾವಿ ಅಧಿವೇಶನದಾಗೂ ಇದೇ ಆಗ್ಲಿಕತ್ತದ. ಹಿಂಗೇ ಆದ್ರ ನಾವ್ ಉತ್ತರ ಕರ್ನಾಟಕದ್ ಮಂದಿ ಏನ್ ಮಾಡೂಣು ಹೇಳ್ರಿ…
ಹೌದ್ರಿ, ಉತ್ತರ ಕರ್ನಾಟಕ ಅಂದ್ರ ಮೊದ್ಲಿಂದಾನೂ ಶಾಪಗ್ರಸ್ತಾನೇ ಆಗ್ಯಾದ. ಬೆಳಗಾವಿ, ಕಲಬುರಗಿ, ಬಳ್ಳಾರಿ, ಧಾರವಾಡ, ಯಾದಗಿರಿ, ವಿಜಯಪುರ, ಬಾಗಲಕೋಟೆ ಸೇರಿ ಯಾವ್ದೇ ಊರಿಗೆ ಹೋಗ್ರಿ ಚೊಲೊ ರಸ್ತೆನೇ ಇಲ್ಲ. ಸರ್ಕಾರಿ ದವಾಖಾನಿಗಳು ಚೆಂದಿಲ್ಲ. ಇದ್ರೂ ನೋಡಾಕ ಡಾಕ್ಟರ್ರೇ ಇರಲ್ಲ. ಸರ್ಕಾರಿ ಸಾಲಿಗೋಳು ಬೀಳಾಕ್ ಆಗ್ಯಾವ. ಸಾಲಿ ಒಳಗ ಒಬ್ರೇ ಹೆಡ್ ಮಾಸ್ತಾರ ಇರ್ತಾರ. ಹಳ್ಳಿ ಜನ ಸ್ವಚ್ಛ್ ಇರೋ ನೀರ್ ಕುಡ್ದು ಜನಕ್ಕ ವರ್ಷಾನೇ ಆಗ್ಯಾವ. ಇಷ್ಟಾದ್ರೂ ಈ ಭಾಗದ್ ಜನರ್ ಸ್ಥಿತಿ ಕೇಳೋರಿಲ್ಲ, ಹೇಳೋರಿಲ್ಲ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ ಬರೋ ಮುಂದ ಕೃಷ್ಣಾ ಮೇಲ್ದಂಡೆ ಕೆಲ್ಸಕ್ಕ್ ವರ್ಷಕ್ಕ 40 ಸಾವಿರ ಕೋಟಿ ರೂ. ಕೊಡ್ತೀನಿ ಅಂದಿತ್ ರೀ. ಆದ್ರ, ಗ್ಯಾರಂಟಿ ಯೋಜನೆಯೊಳಗ ಸರ್ಕಾರ ಕೃಷ್ಣಾ ಮೇಲ್ದಡೆ ಯೋಜನೆಯನ್ನೇ ಮರತಾದ. ಇನ್ನ ವಾರಕ್ ಒಂದ್ಸಲ ಹಳ್ಳೀಗಳಿಗಿ ಕುಡಿಯೋ ನೀರ್ ಬರ್ತಾದ. ಒಂದೊಂದ್ ಸಲ ಅದೂ ಬರಲ್ಲ. ಹಳ್ಳದ್ ನೀರ್ ಕುಡ್ದು ಜನ ಹೈರಾಣ ಆಗ್ಯಾರ. ಕಾಲುವೆಗಳ ಒಳಗ ರಾಸಾಯನಿಕ ಮಿಶ್ರಣ ಮಾಡಿ ಅದೂ ವಿಷ ಆಗ್ಯಾದ.
ಉತ್ತರ ಕರ್ನಾಟಕ ಭಾಗದಾಗ 72 ಶಾಸಕರ್ ಅದಾರ. ಅವ್ರಿಗೆ ವರ್ಷಕ್ ಕೊಡೋ 32 ಲಕ್ಷ ರೂ. ಅನುದಾನನೂ ಸದ್ಬಳಕೆ ಆಗೋವಲ್ದು. ಹಂಗಾಗಿ, ಹಳ್ಳಿಗಳ್ ರಸ್ತೆ ಹಾಳಾಗಿ ಹೋಗ್ಯಾವ. ಒಳ್ಳೇ ಸಾಲಿ ಇಲ್ಲ, ಸಾಲಿಯೊಳಗ್ ಶಿಕ್ಷಕರ್ ಇಲ್ಲ. ಹಂಗಾಗಿ, 10, 12ನೇ ಕ್ಲಾಸ್ ರಿಸಲ್ಟ್ನೊಳಗ ಈ ಭಾಗದ್ ವಿದ್ಯಾರ್ಥಿಗಳು ಲಾಸ್ಟ್ ಇರ್ತಾವ. ಅತಿಥಿ ಶಿಕ್ಷಕರಿಗೆ ಪಗಾರ ಕೊಡಾಕೂ ಸರ್ಕಾರಕ್ ಆಗೋವಲ್ದು. ಹಿಂಗ ಆದ್ರ ನಾವೇನ್ ಮಾಡ್ಬೇಕು? ಯಾರಿಗ್ ಹೇಳ್ಬೇಕು ಅಂತಾರ ಈ ಭಾಗದ್ ಜನ.
ಭಾರಿ ಮಳಿಗ್ ಸಿಲ್ಕಿ ಉತ್ತರ ಕರ್ನಾಟಕದ ಬೆಳಿ ಹಾಳ್ ಆಗ್ಯಾದ. ಎಕರೆಗೆ ಸರ್ಕಾರ ನೀಡೋ ಬಿಡಿಗಾಸೂ ಪರಿಹಾರ ಸಿಗೋವಲ್ದು. ಇನ್ನು ಕಲಬುರಗಿ ಜಿಲ್ಲೆಯೊಳಗ 3 ಲಕ್ಷ ಎಕರೆ ತೊಗರಿಗಿ ರೋಗ ಹತ್ಯಾದ. ನೀರಾವರಿ ಮೂಲಕ ನೀರ್ ಕೊಡ್ತೀನಿ ಅಂದೋರು ಸುಮ್ನ ಮಲಗ್ಯಾರ. ಹಂಗಾಗಿ ರೈತ್ರು ಬೆಂಗ್ಳೂರಿಗಿ ಗುಳೆ ಹೊಂಟಾರ. ಉತ್ತರ ಕರ್ನಾಟಕ ಅಭಿವೃದ್ಧಿ ಎಲ್ಯಾದ? ಕಲ್ಯಾಣ ಕರ್ನಾಟಕ ಹೆಂಗ್ ಕಲ್ಯಾಣ ಆಗ್ತಾದ?
ಬಳ್ಳಾರಿ ಆಸ್ಪತ್ರೆಯೊಳಗ 50 ದಿನದಾಗ 10 ಗರ್ಭಿಣಿಯರು ಮೃತಪಟ್ಟಾರ. ರಾಯಚೂರು ರಿಮ್ಸ್, ಸಿಂಧನೂರು ತಾಲೂಕು ಆಸ್ಪತ್ರೆಯೊಳಗೂ ಹಿಂಗೇ ಸಾಯ್ಲಾಕತ್ತಾರ. ದವಾಖಾನಿ ಇದ್ರ ಡಾಕ್ಟರ್ ಇಲ್ಲ. ಡಾಕ್ಟರ್ ಇದ್ದರ ದವಾಖಾನಿ ಸರಿ ಇಲ್ಲ. ಸಿಬ್ಬಂದಿಯಂತೂ ನೋಡಾಕೂ ಸಿಗಂಗಿಲ್ಲ. ಹಿಂಗ ಹೇಳ್ಕೋತ ಹೋದ್ರ ಉತ್ತರ ಕರ್ನಾಟಕದ್ ಸಮಸ್ಯೆ ಇದ್ ಹಂಗ್ ಉಳಿಯುವಂಗ್ ಕಾಣಾಕತ್ತೈತ್ರಿ. ಬರೋ ಸರ್ಕಾರ್ ಗೋಳ್ ಮಾತ್ರ ಬರೇ ಮಾತಾಡ್ತಾರ್ ಹೊರತೂ ಮಾತ್ ಮಾತ್ರ ಉಳಸಗೊಳಾಗತ್ತಿಲ್ಲರೀ…
ಎಲೆಕ್ಷನ್ ಬಂದಾಗಂತೂ ರಾಜಕಾರಣಿಗಳು ಉತ್ತರ ಕರ್ನಾಟಕಕ್ ಬರ್ತಾರ. ಇಲ್ಲಿನ ಜನರ ವೋಟ್ ತಗೊಂಡ್ ಹೋಕ್ಕಾರ. ಆದ್ರ, ಅಭಿವೃದ್ಧಿ ಅಂದ್ರ ಮೂಗು ಮುರೀತಾರ. ಪರಿಸ್ಥಿತಿ ಹಿಂಗೇ ಆದ್ರ, ಬ್ಯಾರೇ ರಾಜ್ಯದ ಕೂಗು ಜಾಸ್ತಿ ಆಕ್ಕೈತಿ. ಜನ ದಂಗೆ ಏಳೋದ್ ಒಂದೇ ಉಳಿದೈತಿ. ಇನ್ನಾದ್ರೂ, ಸರ್ಕಾರ ಎಚ್ಚೆತ್ತುಕೊಂಡ್ರ, ನಿದ್ದೆಯಿಂದ್ ಎದ್ರ ಚೆಂದ್ ಇರ್ತೈತಿ.