ಕುಟುಂಬ ಧಿಕ್ಕರಿಸಿ ಪ್ರಿಯಕರನೊಂದಿಗೆ ಹೋಗಿ ಮದುವೆಯಾಗಿದ್ದವಳಿಗೆ, ಆತನ ಮತ್ತೊಂದು ಮುಖ ಗೊತ್ತಾಗುತ್ತಿದ್ದಂತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಅಪ್ಪ- ಅಮ್ಮ ಬಿಟ್ಟು ಇಡೀ ಕುಟುಂಬ ಧಿಕ್ಕರಿಸಿ ಪ್ರೀತಿಸದವನ ಹಿಂದೆ ಹೋಗಿದ್ದ ಮಹಿಳೆಗೆ ಪ್ರಿಯಕರನ ಕಾಮ ಪುರಾಣ ಗೊತ್ತಾಗಿದೆ. ಹೀಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ರಂಜಿತಾ(25) ಆತ್ಮಹತ್ಯೆಗೆ ಶರಣಾದ ಮಹಿಳೆ. ಈ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪೇಗೌಡ ನಗರದಲ್ಲಿ ನಡೆದಿದೆ. ರಂಜಿತಾ ಹಲವು ವರ್ಷಗಳಿಂದ ಕಿಶೋರ್ ಎಂಬಾತನನ್ನು ಪ್ರೀತಿಸುತ್ತಿದ್ದರು. ನಂತರ ಮದುವೆಯಾಗುವುದಕ್ಕೆ ನಿರ್ಧರಿಸಿದ್ದರು. ಆದರೆ, ಇವರಿಬ್ಬರ ಮದುವೆಗೆ ರಂಜಿತಾ ಕುಟುಂಬಸ್ಥರು ವಿರೋಧಿಸಿದ್ದರು. ಹೀಗಾಗಿ ರಂಜಿತ ಕುಟುಂಬಸ್ಥರನ್ನೇ ಬಿಟ್ಟು ಆತನ ಹಿಂದೆ ಹೋಗಿದ್ದರು. ನಂತರ ಇಬ್ಬರೂ ಮದುವೆಯಾಗಿದ್ದರು.
ಆರಂಭದಲ್ಲಿ ಸಂಸಾರ ಚೆನ್ನಾಗಿಯೇ ಸಾಗಿತ್ತು. ಇತ್ತ ರಂಜಿತಾ ಗರ್ಭಿಣಿ ಕೂಡ ಆಗಿದ್ದರು. ಈ ಸುದ್ದಿ ರಂಜಿತಾ ಕುಟುಂಬಸ್ಥರಿಗೆ ತಿಳಿಯುತ್ತಿದ್ದಂತೆ ರಂಜಿತಾಳೊಂದಿಗೆ ಮಾತನಾಡಲು ಆರಂಭಿಸಿದ್ದರು. ಆದರೆ, ಇತ್ತೀಚೆಗೆ ಪತಿಯ ಕಾಮಪುರಾಣಗಳು ಬೆಳಕಿಗೆ ಬರಲು ಆರಂಭಿಸಿವೆ. ಪತಿ ಕಿಶೋರ್, ಪತ್ನಿ ಬಿಟ್ಟು ಮತ್ತಿಬ್ಬರು ಮಹಿಳೆಯರೊಂದಿಗೆ ಸರಸ ಸಲ್ಲಾಪ ನಡೆಸಿದ್ದ. ಈ ವಿಷಯ ಆತನ ಮೊಬೈಲ್ ನಿಂದಲೇ ರಂಜಿತಾಗೆ ಗೊತ್ತಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಜೊತೆಗೆ ಸೇರಿ ಕಿಶೋರ ಚಿತ್ರಹಿಂಸೆ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ಮಹಿಳೆಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಶೋರ್, ಇಬ್ಬರು ಮಹಿಳೆಯರು ಸೇರಿದಂತೆ 10 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಸದ್ಯ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ