14 ವರ್ಷಗಳ ಹಿಂದೆ.. ನಿಜಕ್ಕೂ ನಾವು ಯೋಚನೆ ಕೂಡ ಮಾಡಿರಲಿಲ್ಲ… ಮೇಲಾಗಿ ನಮ್ಮ ತಲೆಯಲ್ಲೂ ಇರಲಿಲ್ಲ. ಮುಂದೊಂದು ದಿನ ಕನ್ನಡಿಗರ ಮಡಿಲಿಗೆ ನಮ್ಮದೇ ನ್ಯೂಸ್ ಚಾನಲ್ ಹಾಕ್ತೇವೆ ಅನ್ನೋ ಸಣ್ಣ ಸುಳಿವು ಕೂಡ ಇರಲಿಲ್ಲ.. ಕರ್ನಾಟಕ ನ್ಯೂಸ್ ಬೀಟ್ ಪತ್ರಿಕೆ ಸುದ್ದಿ ವಾಹಿನಿಯಾಗಿ ಜನ್ಮ ತಾಳಿ ಕನ್ನಡಿಗರ ಕಷ್ಟ-ಸುಖ ಕೇಳುತ್ತೆ ಅನ್ನೋ ಸಣ್ಣ ಆಲೋಚನೆಯೂ ಇರಲಿಲ್ಲ.. ಇಷ್ಟೆಲ್ಲಾ ʻಇಲ್ಲಾ.. ಇಲ್ಲʼಗಳ ನಡುವೆಯೂ ತಲೆಯಲ್ಲಿ ಸಣ್ಣದೊಂದು ʻಚಾನಲ್ʼ ಯೋಚನೆ ಮೊಳಕೆ ಒಡೆದಿತ್ತು. ಅದಿವತ್ತು ಜನ್ಮ ತಳೆದು ಸಸಿಯಾಗಿ ಕರ್ನಾಟಕ ನ್ಯೂಸ್ ಬೀಟ್ ವಾಹಿನಿಯಾಗಿ ನಳನಳಿಸುತ್ತಿದೆ. ಇವತ್ತಷ್ಟೇ (ಅಕ್ಟೋಬರ್-2) ವಿಜಯ ದಶಮಿಯಂದು ಮಾಧ್ಯಮ ಲೋಕದ ಜಗತ್ತಿಗೆ ಪ್ರವೇಶ ಪಡೆದು ಅಂಬೆಗಾಲಿಟ್ಟಿದೆ. ಮುಂದೆ ಇಡಬೇಕಾದ ಹೆಜ್ಜೆ ಸಾಕಷ್ಟಿದೆ.. ನಿಮ್ಮ ಕಷ್ಟ-ಸುಖಕ್ಕೆ ಧ್ವನಿಯಾಗಿ ಬೆಳೆಯಬೇಕಿದೆ. ಅದಕ್ಕೆ ನಿಮ್ಮಗಳ ಸಹಕಾರ ಆಶೀರ್ವಾದವೂ ಬೇಕಿದೆ.. ಅದನ್ನ ನೀವು ನೆರವೇರಿಸುತ್ತೀರಾ ಅನ್ನೋ ಭರವಸೆ ನಮ್ಮದು.

ಕೆಲ ತಿಂಗಳ ಹಿಂದಷ್ಟೇ.. ಕರ್ನಾಟಕ ನ್ಯೂಸ್ ಬೀಟ್.. ವೆಬ್‌ಸೈಟ್‌ನಲ್ಲಿ ಸುದ್ದಿ ಬಿತ್ತರಿಸ್ತಾ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಸ್ಪರ್ಧೆ ನೀಡ್ತಾ ಮುಂದೆ ಸಾಗಿತ್ತು.. ಸಾಗ್ತಾನೂ ಇದೆ. ಆ ಬಳಿಕ ಸೋಷಿಯಲ್ ಮೀಡಿಯಾದಲ್ಲೂ ಒಂದ್ ಕೈ ನೋಡೋಣ ಅಂತಾ ಅಲ್ಲೂ ವಿಭಿನ್ನವಾಗಿ ನ್ಯೂಸ್ ನೀಡಲಾಗ್ತಿತ್ತು. ಅದರ ಜೊತೆ-ಜೊತೆಗೇನೆ ತೆರೆಯ ಹಿಂದೆ ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ವಾಹಿನಿಯನ್ನು ತೆರೆಯ ಮೇಲೆ ತರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗ್ತಿತ್ತು. ಆನ್ ಏರ್‌ಗೆ ಬರೋಕೆ ಮುಂಚೆ ವೃತ್ತಿ ಸಂಬಂಧಿತ ಕಸರತ್ತು ನಿರಂತರವಾಗಿ ಸಾಗಿತ್ತು. ಆರಂಭದಲ್ಲಿ 10 ರಿಂದ 15 ರಷ್ಟಿದ್ದ ಸಿಬ್ಬಂದಿ ಇವತ್ತು 60 ಕ್ಕೆ ತಲುಪಿದೆ. ಕನ್ನಡಿಗರ ಮೇಲಿನ ನಂಬಿಕೆ.. ನೀವು ಕೈ ಬಿಡಲಾರಿರಿ ಅನ್ನೋ ಆಶಯದೊಂದಿಗೆ ಕರ್ನಾಟಕ ನ್ಯೂಸ್ ಬೀಟ್ ವಾಹಿನಿಯನ್ನ ನಿಮ್ಮ ಮಡಿಲಿಗೆ ಹಾಕಿದ್ದೇವೆ.

ನಮ್ಮದು ಸ್ಪಷ್ಟ, ನಿಖರ ಯೋಚನೆ, ಚಿಂತನೆ ಜೊತೆಗೆ ವೀಕ್ಷಕರಿಗೆ ಏನೂ ಕೊಡಬೇಕು, ಏನು ಕೊಟ್ಟರೆ ಚಾನಲ್ ಬದಲಾಯಿಸದೆ ಕರ್ನಾಟಕ ನ್ಯೂಸ್ ಬೀಟ್ ನೋಡ್ತಾರೆ ಅನ್ನೋ ನಿಖರ ಅರಿವಿದೆ. ವಿಭಿನ್ನವಾಗಿ ಮನ ಮುಟ್ಟುವ ಹಾಗೆ ಹೇಗೆ ಸುದ್ದಿ ಬಿತ್ತರಿಸಬೇಕು ಎಂಬ ಜಾಣ್ಮೆ ನಮ್ಮ ತಂಡಕ್ಕಿದೆ. ಎಲ್ಲರೂ ವೃತ್ತಿಪರರೇ ಆಗಿರೋದ್ರಿಂದ ಅದನ್ನ ನಾವು ನಿಭಾಯಿಸಬಲ್ಲೆವು ಎಂಬ ತಿಳುವಳಿಕೆಯೂ ಇದೆ.. ಇದು ನಾವು ನಿಮಗೆ ಕೊಡ್ತಿರೋ ಪ್ರಾಮೀಸ್..

ಲಾಸ್ಟ್ ಇನ್ನೊಂದೆರಡು ಮಾತು… ನಾವು ಯಾರ ಮರ್ಜಿಗೂ-ಮುಲಾಜಿಗೂ ಒಳಗಾಗಲ್ಲ.. ಕನ್ನಡ ಅಸ್ಮಿತೆ, ನೆಲ-ಜಲ, ಭಾಷೆ ವಿಷ್ಯದಲ್ಲಿ ಕಾಂಪ್ರೋಮೈಸ್ ಆಗೋ ಮಾತೇ ಇಲ್ಲ. ಭ್ರಷ್ಟರನ್ನ ಮಟ್ಟ ಹಾಕದೆ ಬಿಡಲ್ಲ. ಸ್ಕ್ಯಾಮ್‌ಗಳ ಬೆನ್ನತ್ತಿ ವ್ಯವಸ್ಥಗೆ ಸಾಣಿ ಹಿಡಿಯದೆ ಬಿಡಲ್ಲ. ಹೊಸ-ಹೊಸ ಸುದ್ದಿ ಕೊಡೋ ವಿಷ್ಯದಲ್ಲಿ ನಾವು ಯಾವತ್ತೂ ಡಲ್ ಆಗಲ್ಲ… ಇದು ನಾವು ನಿಮಗೆ ಕೊಡ್ತಿರೋ ವಾಗ್ದಾನ.



















