ಹಾಸನ: ದಾನ ಕೋರುವ ನೆಪದಲ್ಲಿ ಒಂಟಿ ಮನೆಯೊಂದಕ್ಕೆ ನುಗ್ಗಿದ್ದ ನಕಲಿ ಸ್ವಾಮೀಜಿಗಳನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಜೇನುಕಲ್ ಸಿದ್ದೇಶ್ವರ ಮಠಕ್ಕೆ ದಾನ ಕೋರುವ ನೆಪದಲ್ಲಿ ఒంಟಿ ಮನೆಯೊಂದಕ್ಕೆ ನಕಲಿ ಸ್ವಾಮೀಜಿಗಳು ನುಗ್ಗಿದ್ದರು. ಇದರಿಂದ ಅನುಮಾನಗೊಂಡ ಸ್ಥಳೀಯರು ಇಬ್ಬರು ಸ್ವಾಮೀಜಿಗಳು ಹಾಗೂ ಮೂವರು ಸಹಚರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಣಕಟ್ಟೆ ಹೋಬಳಿ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾವಿಧಾರಿಯಾಗಿ ಇಬ್ಬರು ಹಾಗೂ ಅವರೊಂದಿಗೆ ಮೂವರು ಬಂದಿದ್ದರು. ತೋಟದಲ್ಲಿದ್ದ ದಾನಶೇಖರಪ್ಪ ಎಂಬುವವರ ಮನೆಗೆ ಇವರು ದಿಢೀರ್ ನುಗ್ಗಿದ್ದಾರೆ.
ಜೇನುಕಲ್ ಸಿದ್ದೇಶ್ವರಸ್ವಾಮಿ ಮಠದಿಂದ ಬಂದಿದ್ದು, ಹೆಚ್ಚಿನ ಧನ ಸಹಾಯ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ತಕ್ಷಣವೇ ಎಚ್ಚೆತ್ತ ಮನೆಯಲ್ಲಿದ್ದ ಮಹಿಳೆ, ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಕಾವಿಧಾರಿಗಳನ್ನು ಹಿಡಿದು ಪ್ರಶ್ನಿಸಿದ್ದಾರೆ. ಆಗ ಕಾವಿಧಾರಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ನಂತರ ಸ್ಥಳೀಯರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಬಂಧಿತ ಐವರು ನ. 3ರಂದು ಕಲ್ಲುಂಡಿ ಗ್ರಾಮಕ್ಕೆ ಭಿಕ್ಷೆ ಕೇಳುವ ನೆಪದಲ್ಲಿ ಬಂದು ಪಿಸ್ತೂಲ್ ತೋರಿಸಿ ಪರಾರಿಯಾಗಿದ್ದರು. ಸದ್ಯ ಈ ಐವರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಬಾಣಾವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.