ಹಾಸನ: ನಗರದಲ್ಲಿನ ಜಾವಾ ಬೈಕ್ ಶೋರೂಂಗೆ ನುಗ್ಗಿದ ಖದೀಮರು, ಹಣದೊಂದಿಗೆ ಕೈಗೆ ಸಿಕ್ಕ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಹಾಸನ ನಗರದ ತಣ್ಣೀರು ಹಳ್ಳದಲ್ಲಿ ಈ ಘಟನೆ ನಡೆದಿದೆ. ಇಲ್ಲಿಯ ಐಡಿಯಲ್ ಮೋಟಾರ್ಸ್ ಜಾವ ಬೈಕ್ ಶೋರೂಂಗೆ ನುಗ್ಗಿದ ಖದೀಮರು 1,29,000 ರೂ. ನಗದು, ಟೀ-ಶರ್ಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಖದೀಮರು ಬೀಗ ಒಡೆದು ಒಳ ನುಗ್ಗಿದ್ದಾರೆ. ಆನಂತರ ಕ್ಯಾಶ್ ಬಾಕ್ಸ್ ನಲ್ಲಿ ಇಟ್ಟಿದ್ದ ನಗದು ದೋಚಿದ್ದಾರೆ. ಅಲ್ಲದೇ, ಇಡೀ ಶೋರೂಂನ್ನು ತಡಕಾಡಿ, ಕೈಗೆ ಸಿಕ್ಕ ವಸ್ತುಗಳನ್ನು ದೋಚಿದ್ದಾರೆ. ಕಿಟಕಿ ಗ್ಲಾಸ್ ಗಳನ್ನು ಕೂಡ ಒಡೆದು ಹಾಕಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.