ಜಿದ್ದಿಗೆ ಬಿದ್ದವರಂತೆ ಸೆಣಸಾಟಕ್ಕಿಳಿದಿರುವ ಇರಾನ್-ಇಸ್ರೇಲ್ ಸದ್ಯಕ್ಕೆ ಶಾಂತವಾಗೋ ಲಕ್ಷಣಗಳು ಕಾಣ್ತಿಲ್ಲ. ನೀನೊಂದು ಹೊಡೆದರೆ ನಾನು ಎರಡನ್ನ ಹೊಡೀತಿನಿ ಅನ್ನೋ ಹಠಕ್ಕೆ ಬಿದ್ದವರಂತೆ ಉಭಯ ದೇಶಗಳು ಸಮರ ಮುಂದುವರಿಸಿವೆ. ಇಸ್ರೇಲ್ ರಾಜಧಾನಿ ಟೆಲ್ ಅವೀವನ್ನೇ ಟಾರ್ಗೆಟ್ ಮಾಡಿ ಇರಾನ್ ಪ್ರತಿದಾಳಿ ನಡೆಸಿತ್ತು. ಈ ದಾಳಿಯಲ್ಲಿ ಇಸ್ರೇಲ್ ನ ಕನಿಷ್ಠ 10 ಮಂದಿ ಪ್ರಾಣತೆತ್ತಿದ್ರು. ಇದಕ್ಕೆ ಪ್ರತ್ಯುತ್ತರವಾಗಿ, ಇಸ್ರೇಲ್ ಕೂಡಾ ನಿನ್ನೆ ರಾತ್ರಿಯಿಡೀ ಕ್ಷಿಪಣಿ ಮಳೆ ಸುರಿಸಿದೆ. ಇರಾನ್ ನ ಅತಿದೊಡ್ಡ ತೈಲಾಗಾರ, ಸೇನಾ ನೆಲೆಗಳನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡಿರೋ ಇಸ್ರೇಲ್, ಇರಾನ್ ನ ಜಂಘಾಬಲವನ್ನೇ ಪುಡಿ ಮಾಡಿರೋ ರಣೋತ್ಸಾಹದಲ್ಲಿದೆ.
ಶಹರಾನ್ ತೈಲ ಸಂಗ್ರಹಾಗಾರ ಧಗಧಗ
ಖೋರಾಮಾಬಾದ್ ನ ರಕ್ಷಣ ಸಚಿವಾಲಯ ಧ್ವಂಸ
ಇಸ್ರೇಲ್ ಮೊಳಗಿಸಿರುವ ಅಂತಿಮ ಪಾಂಚಜನ್ಯಕ್ಕೆ ಇರಾನ್ ಇನ್ನಿಲ್ಲದಂತೆ ನಿರ್ನಾಮವಾಗ್ತಿದೆ. ಇರಾನ್ ನ ಎರಡು ತೈಲ ಸಂಸ್ಕರಣ ಘಟಕಗಳು ಹಾಗೂ ಇರಾನ್ ಅತಿ ದೊಡ್ಡ ಅನಿಲ ನಿಕ್ಷೇಪಗಳನ್ನೇ ಇಸ್ರೇಲ್ ನಿನ್ನೆ ಗುರಿಯಾಗಿಸಿದೆ. ಭಾನುವಾರ ನಡೆದ ರಣಘೋರ ದಾಳಿ ಇರಾನ್ ನಲ್ಲಿರುವ ಜಗತ್ತಿನ ಅತಿ ದೊಡ್ಡ ತೈಲಾಗಾರವನ್ನೇ ಉಡೀಸ್ ಮಾಡಿದೆ. ಇಲ್ಲಿನ ಶಹರಾನ್ ನಲ್ಲಿರುವ ತೈಲ ಸಂಗ್ರಹಾರವನ್ನೇ ಟಾರ್ಗೆಟ್ ಮಾಡಿ ಕ್ಷಿಪಣಿ ದಾಳಿ ನಡೆಸಲಾಗಿದೆ. ಪರಿಣಾಮ, ತೈಲಾಗಾರ ಸಂಪೂರ್ಣ ಹೊತ್ತಿ ಉರಿಯುತ್ತಿದೆ. ಇನ್ನೊಂದೆಡೆ ಸೌತ್ ಪಾರ್ಸ್ ನಲ್ಲಿರುವ ಅತಿದೊಡ್ಡ ಅನಿಲ ನಿಕ್ಷೇಪವನ್ನೂ ಇಸ್ರೇಲ್ ಚಿಂದಿ ಉಡಾಯಿಸಿದೆ. ಕ್ಷಿಪಣಿ ದಾಳಿ ಬೆನ್ನಲ್ಲೇ, ಇರಾನ್ ತನ್ನ ಅನಿಲ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಇನ್ನೊಂದೆಡೆ, ಖೋರಾಮಾಬಾದ್ ನಲ್ಲಿರುವ ಇರಾನ್ ರಕ್ಷಣಾ ಸಚಿವಲಯವನ್ನೂ ಇಸ್ರೇಲ್ ನೆಲಮಗೊಳಿಸಿದೆ. ಅಷ್ಟೇ ಅಲ್ಲಾ ಈ ದಾಳಿ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್, ಟೆಹ್ರಾನ್ ಹೊತ್ತಿ ಉರಿಯುತ್ತಿದೆ ಎಂದಿದ್ದಾರೆ.
ಭಾರತಕ್ಕೂ ತಟ್ಟಲಿದೆಯಾ ಇರಾನ್-ಇಸ್ರೇಲ್ ಸಮರದ ಕಾವು
ಶೀಘ್ರವೇ ಕೈಸುಡಲಿದೆಯಾ ತೈಲ, ಅನಿಲ ಬೆಲೆಗಳು
ಇಸ್ರೇಲ್ ನಡೆಸಿರುವ ದಾಳಿಯಲ್ಲಿ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣ ಘಟಕ ಹೊತ್ತಿ ಉರಿಯುತ್ತಿದ್ರೆ, ಇತ್ತ ಅನಿಲ ನಿಕ್ಷೇಪಗಳು ಬೆಂಕಿಯುಂಡೆ ಉಗುಳುತ್ತಿವೆ. ಹೀಗಾಗಿ ಶೀಘ್ರವೇ ಇದರ ಕಾವು ಭಾರತ ಸೇರಿದಂತೆ ಹಲವು ರಾಷ್ಟ್ರಗಳ ನೆಮ್ಮದಿ ಕೆಡಿಸಬಹುದು. ಹೌದು, ಇರಾನ್ ನ ತೈಲ ಘಟಕಗಳ ಬೆಂಕಿ ಶೀಘ್ರವೇ ಕಚ್ಚಾತೈಲ ಬೆಲೆಯನ್ನು ಗಮನಮುಖಿಯಾಗಿಸಬಹುದು. ಈಗಾಗಲೇ ಇಸ್ರೇಲ್ ದಾಳಿ ತಾರಕಕ್ಕೇರ್ತಿದ್ದಂತೆ, ಇತ್ತ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡ 14ರಷ್ಟು ಏರಿಕೆ ಕಂಡಿದೆ. 1 ಬ್ಯಾರಲ್ ಕಚ್ಚಾ ತೈಲದ ಬೆಲೆ 7 ಸಾವಿರ ರೂಪಾಯಿಗೆ ತಲುಪಿದೆ. ಯುದ್ಧ ಹೀಗೇ ಮುಂದುವರಿದ್ರೆ ಈ ದರ ಮತ್ತಷ್ಟು ಗಗನಕ್ಕೇರೋ ಸಾಧ್ಯತೆಗಳಿವೆ. ಹೀಗಾದಲ್ಲಿ ಭಾರತದಲ್ಲೂ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗುವ ಸಾಧ್ಯತೆಗಳಿವೆ.
ಭಾರತ-ಪಾಕ್ ಮಾದರಿ ಈ ಯುದ್ಧವನ್ನೂ ನಿಲ್ಲಿಸ್ತೀನಿ
ನೆತನ್ಯಾಹು ಪುತ್ರನ ಮದುವೆ ಮುಂದೂಡಿಕೆ
ಇನ್ನು ಇಸ್ರೇಲ್ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟು ಪದಗಳಲ್ಲಿ ಟೀಕಿಸಿದ್ದಾರೆ. ಅಷ್ಟೇ ಅಲ್ಲಾ, ಭಾರತ-ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದ್ದೇ ನಾನು ಅಂತಾ ಪುನರುಚ್ಛರಿಸಿದ್ದಾರೆ. ಆಪರೇಷನ್ ಸಿಂಧೂರಕ್ಕೆ ಬ್ರೇಕ್ ಹಾಕಿದ್ದೇ ನಾನು ಅಂತಾ ಜಗತ್ತಿನ ಮುಂದೆ ಟ್ರಂಪ್ ಇದೀಗ 14ನೇ ಬಾರಿ ಘಂಟಾಘೋಷವಾಗಿ ಹೇಳಿದ್ದಾರೆ. ಶೀಘ್ರವೇ ಇದೇ ಮಾದರಿಯಲ್ಲಿ ಇಸ್ರೇಲ್-ಇರಾನ್ ಸಮರಕ್ಕೂ ನಾನೇ ತಿಲಾಂಜಲಿ ಹಾಡ್ತಿನಿ ಅಂದಿದ್ದಾರೆ. ಇತ್ತ ಎಲ್ಲ ಅಂದುಕೊಂಡಂತಾಗಿದ್ರೆ, ಇವತ್ತು ಇಸ್ರೇಲ್ ಪ್ರಧಾನಿ ಬೆಂಜಮನ್ ನೇತನ್ಯಾಹು ಪುತ್ರ ಅವ್ನೆರ್ ನೆತನ್ಯಾಹು ವಿವಾಹ ನೆರವೇರಬೇಕಿತ್ತು. ಬಹುಕಾಲದ ಗೆಳತಿ ಅಮಿತ್ ಯುರ್ದೇನಿ ಜೊತೆ ಅವ್ನೆರ್ ಸಪ್ತಪದಿ ತುಳಿಯಬೇಕಿತ್ತು. ಆದ್ರೆ, ಯುದ್ಧ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಈ ಕಲ್ಯಾಣವನ್ನೀಗ ಮುಂದೂಡಲಾಗಿದೆ. ಒಟ್ನಲ್ಲಿ, ಇಸ್ರೇಲ್ ಸುಮ್ಮನಾಗ್ತಿಲ್ಲ, ಇರಾನ್ ಮಂಡಿಯೂರ್ತಿಲ್ಲ ಅನ್ನೋಹಾಗಾಗಿದ್ದು, ಮುಂದೆ ಈ ಕದನ ಚರಣ ಇನ್ನೆಷ್ಟರ ಮಟ್ಟಿಗೆ ಆಪೋಷನ ಪಡೆಯುತ್ತೆ ಅನ್ನೋದು ಈಗಿರುವ ಪ್ರಶ್ನೆ.



















