ಭಾರತ ಹಾಗೂ ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತೀಯ ತಂಡ ದಾಖಲೆಯ ಮೊತ್ತ ಕಲೆ ಹಾಕಿ ಐತಿಹಾಸಿಕ ಸಾಧನೆ ಮಾಡಿದೆ.
ಭಾರತ ತಂಡವು ನಿಗದಿತ 20 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಬರೋಬ್ಬರಿ 234 ರನ್ ಗಳಿಸಿದೆ. ಆದರೆ, ಇದೇ ಮೈದಾನದಲ್ಲಿ ನಿನ್ನೆ ನಡೆದ ಮೊದಲ ಟಿ20 ಪಂದ್ಯದಲ್ಲಿ ಕೇವಲ 115 ರನ್ ಗಳಿಸಲಾಗದೆ ಭಾರತ ತಂಡ 102 ರನ್ಗಳಿಗೆ ಆಲೌಟ್ ಆಗಿ ಸೋಲು ಕಂಡಿತ್ತು. ಆದರೆ, ಭಾನುವಾರ ಮಾತ್ರ ಸೇಡು ತೀರಿಸಿಕೊಳ್ಳುವುದರ ಮೂಲಕ ವಿಶ್ವ ದಾಖಲೆಯನ್ನೂ ಬರೆದಿದೆ.
ಹರಾರೆ ಮೈದಾನದಲ್ಲಿ ಟೀಂ ಇಂಡಿಯಾ, 234 ಕಲೆಹಾಕುವ ಮೂಲಕ ಈ ಮೈದಾನದಲ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ದಾಖಲೆ ಬರೆದಿದೆ. ಇದಕ್ಕೂ ಮುನ್ನ 229 ರನ್ ಬಾರಿಸಿದ್ದ ಆಸ್ಟ್ರೇಲಿಯಾದ ಹೆಸರಿನಲ್ಲಿ ಈ ದಾಖಲೆ ಇತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕೆ ಇಳಿದರು.

ಈ ಪಂದ್ಯದಲ್ಲೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಟೀಂ ಇಂಡಿಯಾ ಕೇವಲ 10 ರನ್ ಗಳಿಸುವಷ್ಟರಲ್ಲಿ ಶುಭ್‌ಮನ್ ಗಿಲ್ ಔಟ್ ಆದರು. ನಂತರ ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ತಂಡದ ಇನ್ನಿಂಗ್ಸ್ ನಿಭಾಯಿಸಿ ತಮ್ಮ ಎರಡನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸಿದ ದಾಖಲೆ ಬರೆದರು. ತಮ್ಮ ವೃತ್ತಿಜೀವನದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕೇವಲ 46 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳ ಸಹಾಯದಿಂದ 100 ರನ್ ಗಳಿಸಿದ ಸಾಧನೆ ಮಾಡಿದರು.

ಆದರೆ ಆ ನಂತರದ ಎಸೆತದಲ್ಲಿ ಅಭಿಷೇಕ್ ಔಟಾದರು. ಈ ಸಂದರ್ಭದಲ್ಲಿ ಅಭಿಷೇಕ್ ಎರಡನೇ ವಿಕೆಟ್ ಗೆ ಗಾಯಕ್ವಾಡ್ ಜೊತೆ 137 ರನ್ ಗಳ ಜೊತೆಯಾಟ ನೀಡಿದ್ದರು. ಆ ನಂತರ ಜೊತೆಯಾದ ಗಾಯಕ್ವಾಡ್ ಹಾಗೂ ರಿಂಕು ಸಿಂಗ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ರುತುರಾಜ್ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ ತಮ್ಮ ಇನ್ನಿಂಗ್ಸ್ನಲ್ಲಿ 47 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 77 ರನ್ ಗಳಿಸಿ ಅಜೇಯರಾಗಿ ಉಳಿದರು. ರಿಂಕು ಸಿಂಗ್ ಕೂಡ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 48 ರನ್ ಗಳ ಅಜೇಯ ಇನ್ನಿಂಗ್ಸ್ ಕಟ್ಟಿದರು. ಈ ಮೂಲಕ ಭಾರತ ತಂಡ ಹೊಸ ಮೈಲಿಗಲ್ಲು ಸಾಧಿಸಿತು.