ಹಾಲಿ ಚಾಂಪಿಯನ್ ಭಾರತೀಯ ಮಹಿಳಾ ಹಾಕಿ ತಂಡವು ಸತತ 5ನೇ ಜಯದೊಂದಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮಹಿಳಾ ಹಾಕಿ ಟೂರ್ನಿಯಲ್ಲಿ ಅಜೇಯ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಸಲಿಮಾ ಟೆಟೆ ಸಾರಥ್ಯದ ಭಾರತ ತಂಡ ತನ್ನ 5ನೇ ಹಾಗೂ ಅಂತಿಮ ಲೀಗ್ ಪಂದ್ಯದಲ್ಲಿ ಜಪಾನ್ ಎದುರು 3-0 ಗೋಲುಗಳಿಂದ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ದೀಪಿಕಾ ಸೆಹ್ರಾವತ್ (47, 48ನೇ ನಿಮಿಷ) ಅವಳಿ ಗೋಲು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ಗೋಲು ಸಿಡಿಸಿದ ಸಾಧಕಿ ಆದರು. ದೀಪಿಕಾ ಟೂರ್ನಿಯ 5 ಪಂದ್ಯಗಳಲ್ಲಿ ಗರಿಷ್ಠ 10 ಗೋಲು ಬಾರಿಸಿದ್ದಾರೆ. ಉಪನಾಯಕಿ ನವನೀತ್ ಕೌರ್ (37) ಮತ್ತೊಂದು ಗೋಲು ಗಳಿಸಿದರು.
ಭಾರತ ಒಟ್ಟು 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದರೆ, ಒಲಿಂಪಿಕ್ಸ್ ರಜತ ವಿಜೇತ ಚೀನಾ 12 ಅಂಕಗಳೊಂದಿಗೆ 2ನೇ ಸ್ಥಾನ ಪಡೆದಿದೆ. ಮಲೇಷ್ಯಾ 6 ಅಂಕಗಳೊಂದಿಗೆ 3ನೇ ಮತ್ತು ಜಪಾನ್ 5 ಅಂಕಗಳೊಂದಿಗೆ 4ನೇ ಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿವೆ.
ಭಾರತ ತಂಡ ಸೆಮಿಫೈನಲ್ ಪಂದ್ಯದಲ್ಲಿ ಮತ್ತೆ ಜಪಾನ್ ತಂಡವನ್ನೇ ಎದುರಿಸಲಿದೆ. ಇನ್ನೊಂದೆಡೆ ಚೀನಾ ಹಾಗೂ ಮಲೇಷ್ಯಾ ಮಧ್ಯೆ ಕಾದಾಟ ನಡೆಯಲಿದೆ. ನಾಳೆ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.