ಟಿ20 ವಿಶ್ವಕಪ್ ನ ಎರಡನೇ ಸೆಮಿಫೈನಲ್ ನಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ 2024 (T20 World Cup)ನ ಫೈನಲ್ ತಲುಪಿದೆ. ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಹಿಟ್ ಮ್ಯಾನ್ ಮಕ್ಕಳಂತೆ ಖುಷಿಯಿಂದ ಕಣ್ಣೀರು ಸುರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಿಂದಿನ ಟಿ20 ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿಯೇ ಇಂಗ್ಲೆಂಡ್ (England) ತಂಡವು ಭಾರತವನ್ನು ಹೀನಾಯವಾಗಿ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಈಗ ಭಾರತ ತಂಡ ಆ ಸೋಲಿನ ಸೇಡು ತೀರಿಸಿಕೊಂಡಿದೆ. ಭಾರತ ತಂಡ ಗೆಲುವು ಸಾಧಿಸುತ್ತಿದ್ದಂತೆ ಎಲ್ಲ ಆಟಗಾರರು ಡ್ರೆಸ್ಸಿಂಗ್ ರೂಮ್ ಕಡೆಗೆ ಹೋಗುತ್ತಿದ್ದಾಗ ರೋಹಿತ್ ಶರ್ಮಾ ಬಾಗಿಲ ಬಳಿ ಇದ್ದ ಕುರ್ಚಿಯಲ್ಲಿ ಕುಳಿತು ಒಂದು ಕೈಯಿಂದ ಮುಖ ಮುಚ್ಚಿಕೊಂಡು ಕಣ್ಣೀರು ಸುರಿಸಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿ ಶರ್ಮಾ ತಲೆ ಮೇಲೆ ಕೈಯಿಟ್ಟು ನಂತರ ಒಳಗೆ ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.
ಟೀಂ ಇಂಡಿಯಾ (Team India) ಫೈನಲ್ ತಲುಪಿರುವ ಕಾರಣ ಅವರು ಭಾವುಕರಾಗಿದ್ದಾರೆ. ಭಾರತಕ್ಕೆ ಟ್ರೋಫಿ ಗೆಲ್ಲುವ ಮತ್ತೊಂದು ಅವಕಾಶ ಸಿಕ್ಕಿದೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಭಾರತೀಯ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.
ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಮೂರನೇ ಬಾರಿಗೆ ಫೈನಲ್ ಪ್ರವೇಶ ಮಾಡಿದೆ. ಇದಕ್ಕೂ ಮುನ್ನ 2007 ಮತ್ತು 2014ರ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಫೈನಲ್‌ಗೆ ತಲುಪಿತ್ತು. 2007ರ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು. 2014ರಲ್ಲಿ ಶ್ರೀಲಂಕಾ ವಿರುದ್ಧ ಸೋಲನ್ನು ಎದುರಿಸಿತ್ತು. ಆದರೆ, ಈ ಬಾರಿ ಫೈನಲ್ ನಲ್ಲಿ ಭಾರತ್ಕೆ ದಕ್ಷಿಣ ಆಫ್ರಿಕಾ ತಂಡ ಎದುರಾಳಿಯಾಗಿದೆ.