ಮೈಸೂರು: ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಣಿ- ಪಕ್ಷಿಗಳಿಗೆ ಕುಡಿಯಲು ನೀರು ಇಲ್ಲದಂತಾಗಿದೆ. ಹೀಗಾಗಿ ಅವು ನೀರಿಗಾಗಿ ಪರದಾಟ ನಡೆಸುತ್ತಿವೆ.
ಹೀಗಾಗಿ ಪಕ್ಷಿಗಳ ದಾಹ ತಣಿಸಲು ಮೈಸೂರು ಯುವಕರ ತಂಡವೊಂದು ಪಣತೊಟ್ಟಿದೆ. ಮರಕ್ಕೆ ಬೌಲ್ ಕಟ್ಟಿ ಪಕ್ಷಿಗಳಿಗೆ ನೀರುಣಿಸುತ್ತಿದ್ದಾರೆ. ಹುಣಸೂರು ತಾಲ್ಲೂಕಿನ ಆಯರಹಳ್ಳಿ ಪ್ರವೀಣ್ ಮತ್ತು ತಂಡದಿಂದ ಈ ರೀತಿಯ ವಿನೂತನ ಮಾನವೀಯ ಕಾರ್ಯ ಮಾಡಲಾಗುತ್ತಿದೆ.
ಪ್ಲಾಸ್ಟಿಕ್ ಡಬ್ಬಗಳಿಗೆ ನೀರು ತುಂಬಿ ಯುವಕರ ತಂಡ ಮರಕ್ಕೆ ತೂಗು ಹಾಕುತ್ತಿದೆ. ಯುವಕರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಇತಿಹಾಸಕಾರ ಧರ್ಮೇಂದ್ರ ಕುಮಾರ್, ತಾವೂ ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಅರಣ್ಯ, ವನ್ಯಜೀವಿ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಬೇಸಿಗೆ ಕಾಲ ಮುಗಿಯುವವರೆಗೂ ಎಲ್ಲರೂ ಪ್ರಾಣಿ ಪಕ್ಷಿಗಳಿಗೆ ನೀರೊದಗಿಸುವ ಕೆಲಸ ಮಾಡಬೇಕು. ನೀರಿನ ತೊಂದರೆ ಇರುವ ಕಡೆಗಳಲ್ಲಿ ಸಾಧ್ಯವಾದಷ್ಟು ನೀರಿನ ವ್ಯವಸ್ಥೆ ಮಾಡಬೇಕು ಎಂದು ಕೂಡ ಯುವಕರ ತಂಡ ಮನವಿ ಮಾಡಿದೆ.