ಬೆಂಗಳೂರು: ಮುಡಾ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ (ಪ್ರಾಸಿಕ್ಯೂಷನ್) ಕೈಗೊಳ್ಳಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ನಾಲ್ಕು ದಶಕಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಕಾನೂನಿನ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಹೀಗಾಗಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಆದೇಶವನ್ನು ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಶ್ನಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಕಾನೂನು ಕ್ರಮಕ್ಕೆ ಆದೇಶಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಾಗುವ ಸಾಧ್ಯತೆ ಇದೆ. ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಅನುಮತಿ ಸಿಕ್ಕ ಕೂಡಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರರು ಸಿಎಂ ಗೃಹ ಕಚೇರಿ ಕೃಷ್ಣಾಕ್ಕೆ ಆಗಮಿಸಿ ಸಮಾಲೋಚನೆ ನಡೆಸಿದ್ದಾರೆ.
ಆನಂತರ ಸಿಎಂ ತುರ್ತು ಸಂಪುಟ ಸಭೆ ಕರೆದಿದ್ದಾರೆ. ಸಭೆಯಲ್ಲಿ ಸಚಿವರೊಂದಿಗೆ ಚರ್ಚಿಸಿ ಆನಂತರ ಮುಂದಿನ ನಡೆಯ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ. ಆದರೆ, ಸಿಎಂ ಖುದ್ದಾಗಿ ಈ ತುರ್ತು ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಅವರ ಬದಲಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಸಂಪುಟ ಸಭೆ ನಡೆಯಲಿದೆ. ಸಂಜೆ ಐದು ಗಂಟೆಗೆ ವಿಧಾನಸೌಧಕ್ಕೆ ಕ್ಯಾಬಿನೆಟ್ ಸಭೆಗೆ ಬರುವಂತೆ ಎಲ್ಲ ಸಚಿವರಿಗೆ ಸೂಚಿಸಲಾಗಿದೆ. ಜು. 26ರಂದು ಇದೇ ಪ್ರಕರಣದಲ್ಲಿ ರಾಜ್ಯಪಾಲರಿಂದ ಸಿದ್ದರಾಮಯ್ಯನವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆ ಸಂದರ್ಭದಲ್ಲಿ ಕೂಡ ತುರ್ತು ಸಭೆ ನಡೆದಿತ್ತು. ಆಗಲೂ ಸಿಎಂ ಸಭೆಯಿಂದ ಹೊರಗೆ ಇದ್ದರು.
ದೂರುದಾರರಲ್ಲೊಬ್ಬರಾದ ಪ್ರದೀಪ್, ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಸ್ವಾಗತಾರ್ಹ. ರಾಜ್ಯಪಾಲರು ಕೊಟ್ಟಿರುವ ಪೂರ್ವಾನುಮತಿಯ ಪ್ರತಿಯನ್ನು ಸೋಮವಾರದಂದು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಸಿಎಂ ವಿರುದ್ಧ ಕಾನೂನು ಕ್ರಮಕ್ಕೆ ನ್ಯಾಯಾಲಯವು ಮಂಗಳವಾರ ಆದೇಶ ನೀಡಬಹುದು ಎಂದು ಹೇಳಿದ್ದಾರೆ.