ಮೈಸೂರು : ರಾಜ್ಯ ಸರ್ಕಾರ ಧರ್ಮಸ್ಥಳದ ಧರ್ಮಾಧಿಕಾರಿ ಅವರನ್ನು ಅರೋಪಿ ಎಂದು ತೀರ್ಮಾನ ಮಾಡುವುದಕ್ಕೆ ಬೇಕಾದ ಸಾಕ್ಷಿ ಈಗ ಅರಸುತ್ತಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಸಿಂಹ, ಧರ್ಮಸ್ಥಳಕ್ಕೆ ಮೀನು ತಿಂದು ಹೋಗಿ ಜನರ ಭಾವನೆಗೆ ಧಕ್ಕೆ ತಂದವರು ಈಗ ಅಲ್ಲಿನ ನಂಬಿಕೆ ಹಾಳು ಮಾಡಲು ತನಿಖೆ ಮಾಡಿಸುತ್ತಿದ್ದಾರೆ. ಸೌಜನ್ಯ ಪ್ರಕರಣಕ್ಕೂ ಈಗ ನಡೆಯುತ್ತಿರುವ ಅಸ್ಥಿ ಹುಡುಕಾಟಕ್ಕೂ ಸಂಬಂಧವೇ ಇಲ್ಲ. ಸರ್ಕಾರ ಧರ್ಮಸ್ಥಳವನ್ನು ಕಬಳಿಸಲು ಈ ಪ್ರಯತ್ನ ಆರಂಭಿಸಿದೆ ಎಂದು ಆರೋಪ ಮಾಡಿದ್ದಾರೆ.
ಧರ್ಮಸ್ಥಳದಲ್ಲಿ ಸಾವಿರಾರು ಕೊಲೆಯಾಗಿದೆ ಎನ್ನುತ್ತಾರೆ. ಇದು ವಾಸ್ತವದಲ್ಲಿ ಸಾಧ್ಯವೇ? ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವುದ್ ಇಬ್ರಾಹಿಂ ? ಎಂದು ಪ್ರಶ್ನಿಸಿದ್ದಲ್ಲದೇ, ಧರ್ಮಸ್ಥಳವನ್ನು ವಿನಾಕರಣ ಗುರಿ ಮಾಡಲಾಗುತ್ತಿದೆ. ಇದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ ಎಂದಿದ್ದಾರೆ.
ಹಿಂದೂ ಸಮಾಜ ಪ್ರಜ್ಞಾವಂತಿಕೆ ಕಳೆದುಕೊಂಡಿದ್ದು, ಧರ್ಮಸ್ಥಳವನ್ನು ಟಾರ್ಗೇಟ್ ಮಾಡಿರುವುದು ಸಮಾಜಕ್ಕೆ ಅರ್ಥವಾಗುತ್ತಿಲ್ಲ. ಧರ್ಮಸ್ಥಳದ ಬಗ್ಗೆ ಅಪನಂಬಿಕೆ ಮೂಡಿಸುವ ಕೆಲಸವನ್ನು ಇಸ್ಲಾಂ ಧರ್ಮದ ಹುಡುಗನೊಬ್ಬ ಮಾಡುತ್ತಾನೆ. ಅದನ್ನು ಹಿಂದೂಗಳು ನಂಬುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ಮ್ಯಾಚ್‌ಗಿಂತಲೂ ಹೆಚ್ಚಾಗಿ ಧರ್ಮಸ್ಥಳದ ವಿಚಾರ ದಿನ ನಡೆಯುತ್ತಿದೆ. ನಮ್ಮ ಧರ್ಮಾಧಿಕಾರಿ ಹೆಗ್ಗಡೆ ಅವರು ಯಾಕೆ ನಿಮಗೆ ಟಾರ್ಗೆಟ್? ಮೊದಲು ಅನಾಮಿಕನ ಪೂರ್ವಪರ ಬಹಿರಂಗ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸೌಜನ್ಯ ಅತ್ಯಾಚಾರ ಪ್ರಕರಣದ ಬಗ್ಗೆ ನೋವಿದೆ. ನಾವೆಲ್ಲರೂ ಸೌಜನ್ಯ ಪರ. ಮೂರು ತನಿಖಾ ಸಂಸ್ಥೆಯಿಂದ ತನಿಖೆಯಾಗಿದೆ. ಬೇರೆ ಇನ್ನೂ ಯಾವುದರ ಮೂಲಕ ತನಿಖೆ ಆಗಬೇಕಿದ್ದರೆ ಸೌಜನ್ಯ ತಾಯಿ ಹೇಳಲಿ. ನಾವೇ ಅವರ ಪರ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತೇವೆ ಎಂದು ತಿಳಿಸಿದ್ದಾರೆ.