ಚಾಮರಾಜನಗರ: ವೀರಪ್ಪನ್ ಇದ್ದಾಗಲೇ ಕಾಡು ಸಮೃದ್ಧವಾಗಿರುತ್ತಿತ್ತು. ಅಕ್ರಮ ಗಣಿಗಾರಿಕೆ-ರೆಸಾರ್ಟ್ಗಳು ನಡೆಯುತ್ತಿರಲಿಲ್ಲ ಎಂದು ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.
ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧ್ಯಕ್ಷತೆಯಲ್ಲಿ ಚಾಮರಾಜನಗರದ ಕೆಡಿಪಿ ಸಭಾಂಗಣದಲ್ಲಿ ಇಂದು ಭಾನುವಾರ ಮಹತ್ವದ ಸಭೆ ನಡೆಯಿತು.
ಈ ಸಭೆಯಲ್ಲಿ ಹುಲಿ ಹತ್ಯೆ ಹಾಗೂ ರೈತರ ಸಾವಿಗೆ ಸರ್ಕಾರವೇ ಜವಾಬ್ದಾರಿ. ಅರಣ್ಯ ಸಚಿವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅರಣ್ಯಾಧಿಕಾರಿಗಳನ್ನು ಸಸ್ಪೆಂಡ್ ಮಾಡುವುದಷ್ಟೇ ಅಲ್ಲ ಅವರನ್ನು ಜೈಲಿಗೆ ಕಳಿಸಬೇಕು. ನಿಜಕ್ಕೂ ಇವತ್ತು ವೀರಪ್ಪನ್ ಇರಬೇಕಿತ್ತು. ಕಾಡು ಸಮೃದ್ಧವಾಗಿರುತ್ತಿತ್ತು. ಕಾಡಿಗೆ ಯಾರು ಹೋಗುತ್ತಿರಲಿಲ್ಲ. ಕಾಡಿನಿಂದ ಪ್ರಾಣಿಗಳು ಹೊರಬರುತ್ತಿರಲಿಲ್ಲ. ಹುಲಿ ಬೇಕು ಹುಲಿ ಬೇಕು ಅಂತೀರಾ. ಐದು ವರ್ಷ ಆದ ಮೇಲೆ ನಮ್ಮ ಮತ ಬೇಕು ಅಂತೀರಾ. ಹುಲಿಗಳ ಕೈಲೇ ವೋಟ್ ಹಾಕಿಸಿಕೊಳ್ಳಿ. ಅಕ್ರಮ ರೆಸಾರ್ಟ್, ಕಾಡಂಚಿನಲ್ಲಿ ಗಣಿಗಾರಿಕೆ ನಿಷೇಧಿಸಿ. ಮಲೆಮಹದೇಶ್ವರ ವನ್ಯಧಾನ ಹುಲಿ ಸಂರಕ್ಷಿತ ಪ್ರದೇಶ ಮಾಡುವುದು ಬೇಡ ಎಂದು ಸರ್ಕಾರದ ವಿರುದ್ಧ ರೈತರು ಕಿಡಿಕಾರಿದ್ದಾರೆ.
ನೀವು ತಡವಾಗಿ ಸಭೆ ಕರೆದಿದ್ದೀರ. ಮೊದಲೇ ಸಭೆ ಕರೆದಿದ್ದರೆ 6 ಹುಲಿ ಸಾಯುತ್ತಿರಲಿಲ್ಲ. ಈಗಾಗಲೇ ಅರಣ್ಯ ಸಚಿವರೇ ರಾಜೀನಾಮೆ ಕೊಡಬೇಕಿತ್ತು. ಅಲ್ಲದೇ ಅರಣ್ಯಾಧಿಕಾರಿಗಳನ್ನು ಸಸ್ಪೆಂಡ್ ಅಲ್ಲ ಅವರನ್ನು ಜೈಲಿಗೆ ಹಾಕಿ. ಅವರನ್ನು ಯಾಕೆ ಬರೀ ಸಸ್ಪೆಂಡ್ ಮಾಡುತ್ತಿರಾ. ಈಗಾಗಲೇ ಶಾಸಕ ಅನಿಲ್ ಚಿಕ್ಕಮಾದು ಅರಣ್ಯಾಧಿಕಾರಿಗಳಿಗೆ ಈ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ನಮ್ಮ ಸ್ವಾಗತವಿದೆ. ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶ ಮಾಡಬೇಡಿ. ಬಂಡೀಪುರ ಹಾಗೂ ನಾಗರಹೊಳೆಯಲ್ಲಿ ಅಕ್ರಮ ರೆಸಾರ್ಟ್‌ಗಳನ್ನು ಬಂದ್ ಮಾಡಿ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಆಗ್ರಹಿಸಿದ್ದಾರೆ.
ಹುಲಿ ದಾಳಿಯಿಂದ ಜನರು ಭಯಭೀತರಾಗಿದ್ದಾರೆ. ವನ್ಯಜೀವಿ ಹಾವಳಿ ತಪ್ಪಿಸುವಂತೆ ರೈತರು ಒತ್ತಾಯಿಸಿದ್ದಾರೆ. ಸಭೆಯಲ್ಲಿ ಸಚಿವರಾದ ಹೆಚ್,ಸಿ.ಮಹದೇವಪ್ಪ, ವೆಂಕಟೇಶ್, ಶಾಸಕ ಸುನೀಲ್ ಬೋಸ್, ಶಾಸಕರಾದ ಪುಟ್ಟರಂಗಶೆಟ್ಟಿ, ಮಂಜುನಾಥ್, ಎಆರ್ ಕೃಷ್ಣಮೂರ್ತಿ, ದರ್ಶನ್ ಧ್ರುವ ನಾರಾಯಣ್ ಸೇರಿ ಅರಣ್ಯಾಧಿಕಾರಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ: ಲಾಲ್ಬಾಗ್ ಹಾಳು ಮಾಡಲು ನಾನು ಮೂರ್ಖನಲ್ಲ | BJP ವಿರುದ್ಧ ವಾಗ್ದಾಳಿ ನಡೆಸಿದ ಡಿಸಿಎಂ
















