ಬೆಂಗಳೂರು: “ಫಸ್ಟ್ ರ‍್ಯಾಂಕ್ ರಾಜು” ಚಿತ್ರದ ನಾಯಕ ನಟ ಗುರುನಂದನ್ ಈಗ ‘ರಾಜು ಜೇಮ್ಸ್ ಬಾಂಡ್’ ಆಗಿ ಬದಲಾಗಿದ್ದಾರೆ. ಅದ್ದೂರಿಯಾಗಿ ಮೂಡಿ ಬಂದಿರುವ ಚಿತ್ರದ ಟ್ರೇಲರ್ ನ್ನು ನಟ ಶ್ರೀಮುರುಳಿ ಬಿಡುಗಡೆ ಮಾಡಿ ಹಾರೈಸಿದ್ದಾರೆ.
ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ, ದೀಪಕ್ ಮಧುವನಹಳ್ಳಿ ನಿರ್ದೇಶನದ ಟ್ರೇಲರ್ ಅನಾವರಣ ಸಮಾರಂಭ ಇತ್ತೀಚಿಗಷ್ಟೇ ನಡೆಯಿತು. ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಈಗಾಗಲೇ ಟ್ರೇಲರ್ ನಿಂದಲೇ ಸಿನಿ ರಸಿಕರ ಮನ ಗೆಲ್ಲುತ್ತಿರುವ ಈ ಚಿತ್ರ ಫೆ. 14ರಂದು ತೆರೆಗೆ ಅಪ್ಪಳಿಸಲಿದೆ. ಈ ಚಿತ್ರ ಹಾಸ್ಯ ಪ್ರಧಾನವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರನ್ನು ರಂಜಿಸುವುದು ನಿಶ್ಚಿತ ಎನ್ನಲಾಗುತ್ತಿದೆ.

ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ ಶ್ರೀಮುರುಳಿ, ಗುರುನಂದನ್ ನಮ್ಮ ಕುಟುಂಬದ ಆತ್ಮೀಯರು. ಅವರು ನಾಯಕರಾಗಿ ನಟಿಸಿರುವ ಈ ಚಿತ್ರದ ಟ್ರೇಲರ್ ಹಾಗೂ ಹಾಡು ಚೆನ್ನಾಗಿ ಮೂಡಿ ಬಂದಿವೆ. ನಾಯಕ, ನಾಯಕಿಯ ಅಭಿನಯ ಹಾಗೂ ನಿರ್ದೇಶನ ಚೆನ್ನಾಗಿದೆ. ನಿರ್ಮಾಪಕರು ಯಾವುದೇ ಕೊರತೆ ಮಾಡದಂತೆ ನಿರ್ಮಾಣ ಮಾಡಿರುವುದು ತೆರೆಯ ಮೇಲೆ ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ.
ನಾಯಕ ನಟ ಗುರುನಂದನ್ ಮಾತನಾಡಿ, ಇಲ್ಲಿಯವರೆಗೆ ನೀವು ನೋಡಿರದ ಗುರುನಂದನ್ ನನ್ನು ಈ ಚಿತ್ರದಲ್ಲಿ ನೋಡಬಹುದು. ನಾನು ಇಲ್ಲಿಯವರೆಗೂ ಮಾಡಿರದ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದು ಹೇಳಿದ್ದಾರೆ.

ಆರಂಭದಿಂದಲೂ ನಮ್ಮ ಚಿತ್ರಕ್ಕೆ ಸಿಗುತ್ತಿರುವ ಪ್ರೋತ್ಸಾಹಕ್ಕೆ ನಾವು ಚಿರ ಋಣಿ. ಪರಿಶುದ್ಧ ಹಾಸ್ಯ ಚಿತ್ರ ಬಂದು ಬಹಳ ದಿನಗಳಾಗಿದೆ. ಒಂದೊಳ್ಳೆ ಉತ್ತಮ ಕಾಮಿಡಿ ಚಿತ್ರ ಇದೇ ಫೆಬ್ರವರಿ 14 ರಂದು ತೆರೆಗೆ ಬರಲಿದೆ. ಸತ್ಯ ಪಿಕ್ಚರ್ಸ್ ಅವರು ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ ಎಂದು ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ಹೇಳಿದರು.
ಇದು ನನ್ನ ಮೊದಲ ಚಿತ್ರ. ಶಿಕ್ಷಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕಿ ಮೃದಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ನಟಿಸಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಮಿತ್ ಚವಳ್ಕರ್ ಅವರ ಸಂಕಲನವಿದೆ. ಜಗದೀಶ್ ನಡನಹಳ್ಳಿ ಸಂಭಾಷಣೆ ಬರೆದಿದ್ದಾರೆ.
