ಬೆಂಗಳೂರು: ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿಯ 18 ಬಿಜೆಪಿ ಶಾಸಕರು ಅಮಾನತ್ತುಗೊಂಡಿದ್ದು, ಆ 18 ಶಾಸಕರ ಕುರಿತು ಚರ್ಚಿಸಲು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ನಾಳೆ ಸಮಯ ನಿಗದಿಗೊಳಿಸಿದ್ದಾರೆ.
ನಾಳೆ ಬೆಳಿಗ್ಗೆ 10:30 ಕ್ಕೆ ವಿಧಾನಸೌಧದ ತಮ್ಮ ಕೊಠಡಿಗೆ ಆಗಮಿಸುವಂತೆ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ಗೆ ಸಮಯ ನೀಡಿದ್ದಾರೆ. 18 ಶಾಸಕರು ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಸ್ಪೀಕರ್ ಪೀಠಕ್ಕೆ ಅಗೌರವ ತೋರಿ, ಸ್ಪೀಕರ್ ಮೇಲೆ ಪೇಪರ್ ಎಸೆದು ಗಲಾಟೆ ಮಾಡಿದ್ದಾರೆ. ಸದನದ ಸಂದರ್ಭದಲ್ಲಿ ಅಗೌರವವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ 6 ತಿಂಗಳ ಕಾಲ 18 ಶಾಸಕರನ್ನು ಅಮಾನತ್ತು ಮಾಡುತ್ತಿದ್ದೇನೆ. ಅವರು ಯಾವುದೇ ಕಮಿಟಿ ಸಭೆಗಳಲ್ಲಿ ಭಾಗಿಯಾಗುವಂತಿಲ್ಲ. ಮುಂದಿನ 6 ತಿಂಗಳ ಕಾಲ ಅವರುಗಳು ಸದನದ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಅವರವರ ಕ್ಷೇತ್ರದಲ್ಲೂ ಕೂಡ ಅವರು ಶಾಸಕ ಸ್ಥಾನದ ಹಕ್ಕು ಬಾಧ್ಯತೆಗಳಿರುವುದಿಲ್ಲ ಎಂದು ಸ್ಪೀಕರ್ ಯು.ಟಿ. ಖಾದರ್ ಆದೇಶ ನೀಡಿದ್ದರು.
18 ಶಾಸಕರ ಅಮಾನತ್ತು ಖಂಡಿಸಿ ಬಿಜೆಪಿ ನಾಯಕರು ಹೋರಾಟ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಹೋರಾಟ ನಡೆಸಿದ್ದರು. ಜೆಡಿಎಸ್‌ನ ಕೆಲ ನಾಯಕರುಗಳು ಬಿಜೆಪಿ ಶಾಸಕರ ಅಮಾನತ್ತು ಖಂಡಿಸಿದ್ದರು. ಅಲ್ಲದೇ, ಸ್ಪೀಕರ್ ಯು.ಟಿ. ಖಾದರ್ ಗೆ ಪತ್ರ ಬರೆದಿದ್ದರು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ನಾಳೆ ಬೆಳಿಗ್ಗೆ ಆರ್.ಅಶೋಕ್‌ಗೆ ಚರ್ಚೆಗೆ ಯು.ಟಿ ಖಾದರ್ ಅವಕಾಶ ಕಲ್ಪಿಸಿದ್ದಾರೆ. ಹೀಗಾಗಿ ನಾಳೆ ಸ್ಪೀಕರ್ ಯು.ಟಿ. ಖಾದರ್ ಹಾಗೂ ಆರ್.ಅಶೋಕ್ ಚರ್ಚೆ ಪ್ರಾಮುಖ್ಯತೆ ಪಡೆದಿದೆ.