T20 World Cup 2024ನ್ನು ಭಾರತ ಗೆದ್ದು ಬೀಗಿದೆ. ಈ ಗೆಲುವಿನ ಮೂಲಕ ಮೂವರು ದಿಗ್ಗಜರ ಯುಗಾಂತ್ಯವಾಗಿದೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದರೆ, ರಾಹುಲ್ ದ್ರಾವಿಡ್ ಅವರ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಈ ಟೂರ್ನಿಯೊಂದಿಗೆ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ ಕೊನೆಗೊಂಡಿದೆ.
ಹೀಗಾಗಿ ಟಿ20 ವಿಶ್ವಕಪ್ ಫೈನಲ್ ಪಂದ್ಯವು ದ್ರಾವಿಡ್ ಪಾಲಿಗೆ ತುಂಬಾ ಮಹತ್ವದ್ದಾಗಿತ್ತು. ಹೀಗಾಗಿ ವಿಶ್ವಕಪ್ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಆಟಗಾರರು ಗುರುವಿಗೆ ಅತ್ಯುತ್ತಮ ಬೀಳ್ಕೊಡುಗೆ ನೀಡಿದ್ದಾರೆ. ಟಿ20 ವಿಶ್ವಕಪ್ ಗೆದ್ದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಇದುವೇ ನನ್ನ ಕೊನೆಯ ಟಿ20 ವಿಶ್ವಕಪ್ ಪಂದ್ಯ ಎಂದು ಹೇಳಿದರು. ಮುಂದಿನ ಪೀಳಿಗೆಯು ಜವಾಬ್ದಾರಿ ಹೊತ್ತುಕೊಳ್ಳಲು ಇದು ಸರಿಯಾದ ಸಮಯ. ಈ ಗೆಲುವಿನೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುವುದಾಗಿ ಹೇಳಿದ್ದಾರೆ.

ಕೊಹ್ಲಿ ಬೆನ್ನಲ್ಲಿಯೇ ರೋಹಿತ್ ಶರ್ಮಾ ಕೂಡ ಟಿ20 ಅಂತಾರಾಷ್ಟ್ರೀಯ ಕೆರಿಯರ್ ಗೆ ನಿವೃತ್ತಿ ಘೋಷಿಸಿದರು. ಗೆದ್ದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ರೋಹಿತ್, ಭಾರತದ ಪರ ನನ್ನ ವೃತ್ತಿಜೀವನವು ಟಿ20 ಕ್ರಿಕೆಟ್ ನೊಂದಿಗೆ ಆರಂಭವಾಗಿತ್ತು. ವಿದಾಯ ಹೇಳಲು ಇದಕ್ಕಿಂತ ಉತ್ತಮ ಸಮಯವಿಲ್ಲ. ಹೀಗಾಗಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳುತ್ತಿರುವುದಾಗಿ ಹೇಳಿದ್ದಾರೆ.
ಈ ಮೂಲಕ ಭಾರತದ ಪರ ಒಂದೇ ದಿನ ಮೂವರು ದಿಗ್ಗಜರ ಯುಗಾಂತ್ಯವಾದಂತಾಗಿದೆ. ಇದರಲ್ಲಿ ಇಬ್ಬರು ಆಟಗಾರರಿದ್ದರೆ, ಒಬ್ಬರು ಕೋಚ್. ಫೈನಲ್ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ ಸೋಲು ಕಂಡಿತು.
