ನವದೆಹಲಿ: ಇನ್ನು 5 ವರ್ಷಗಳಲ್ಲಿ ಭಾರತದ ಜಿಡಿಪಿ ತಲಾದಾಯ ದ್ವಿಗುಣಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ಮೂಡಿಸಿದ್ದಾರೆ.
ದೇಶದ ರಾಜಧಾನಿಯಲ್ಲಿ ನಡೆದ ಕೌಟಿಲ್ಯ ಆರ್ಥಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮುಂದಿನ ದಶಕಗಳಲ್ಲಿ ಸರ್ಕಾರದ ರಚನಾತ್ಮಕ ಸುಧಾರಣೆಗಳ ಪರಿಣಾಮವಾಗಿ ಸಾಮಾನ್ಯ ವ್ಯಕ್ತಿಯ ಜೀವನ ಮಟ್ಟದಲ್ಲಿ ಬಹಳಷ್ಟು ಸುಧಾರಣೆ ಕಾಣಬಹುದು. ಭಾರತ 2,730 ಡಾಲರ್ ತಲಾದಾಯ ಮಟ್ಟ ತಲುಪಲು 75 ವರ್ಷ ಬೇಕಾಯಿತು. ಇನ್ನೈದೇ ವರ್ಷದಲ್ಲಿ ತಲಾದಾಯ ಮತ್ತಷ್ಟು 2,000 ಡಾಲರ್ ಏರಿಕೆ ಆಗುತ್ತದೆ ಎಂದು ಹೇಳಿದ್ದಾರೆ.
ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದ ಭಾರತ ಕೇವಲ ಐದು ವರ್ಷದಲ್ಲಿ ಐದನೇ ಸ್ಥಾನಕ್ಕೆ ಏರಿದೆ. ಇದು ಭಾರತ ಸಾಧಿಸಿದ ಆರ್ಥಿಕ ಪ್ರಗತಿಯ ಸಂಕೇತವಾಗಿದೆ. 2,730 ಡಾಲರ್ ಗಳ ತಲಾದಾಯ ಮಟ್ಟ ತಲುಪಲು ನಮಗೆ 75 ವರ್ಷ ಬೇಕಾಯಿತು. ಐಎಂಎಫ್ ಅಂದಾಜು ಪ್ರಕಾರ ಮುಂದಿನ ಐದು ವರ್ಷದಲ್ಲಿ ತಲಾದಾಯ 2,000 ಡಾಲರ್ ಏರಿಕೆಯಾಗಲಿದೆ ಎಂದು ಹೇಳಿದ್ದಾರೆ.
‘ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ಆರ್ಥಿಕ ಮತ್ತು ರಚನಾತ್ಮಕ ಕ್ರಮಗಳ ಪರಿಣಾಮವಾಗಿ ಈ ಸುಧಾರಣೆಗಳು ಮುಂದುವರಿಯಬಹುದು. 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷವಾಗುತ್ತದೆ. ಹೊಸ ಭಾರತ ಶ್ರೀಮಂತವಾಗಿರಲಿದೆ ಎಂದಿದ್ದಾರೆ.