ಈಗಾಗಲೇ ಸಾಲದ ಸೂಳಿಗೆ ಸಿಲುಕಿರುವ ಬಿಡಿಎ ಮತ್ತೆ ಸಾಲ ಮಾಡಿ ತುಪ್ಪ ತಿನ್ನುವ ಆಲೋಚನೆ ಮಾಡುತ್ತಿದೆ. ಹೊಸ ಯೋಜನೆಯ ಹೆಸರಿನಲ್ಲಿ ಮತ್ತೆ ಸಾಲಕ್ಕೆ ಮೊರೆ ಇಟ್ಟಿದೆ.
ಹೊಸ ಯೋಜನೆಗಾಗಿ ಸಾಲ ಕೇಳಿದ್ದು, 27 ಸಾವಿರ ಕೋಟಿ ಸಾಲ ನೀಡಲು ಹುಡ್ಕೊ ಮುಂದಾಗಿದೆ. ಬೆಂಗಳೂರು ಬಿಸಿನೆಸ್ ಕಾರಿಡಾರ್’ (ಬಿಬಿಸಿ) ನಿರ್ಮಾಣಕ್ಕೆ ವಸತಿ ಮತ್ತು ನಗರಾಭಿವೃದ್ಧಿ ಕಾರ್ಪೊರೇಷನ್ (ಹುಡ್ಕೊ) 27 ಸಾವಿರ ಕೋಟಿ ರೂ. ಸಾಲ ನೀಡಲು ಒಪ್ಪಿಗೆ ನೀಡಿದೆ. ಹೀಗಾಗಿ ಸದ್ಯದಲ್ಲೇ ಎರಡೂ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಳ್ಳಲಿವೆ.
ಬಿಡಿಎ ಕಾಯಿದೆ ಹಾಗೂ ಭೂ ಸ್ವಾಧೀನ ಪರಿಹಾರ ಕಾಯಿದೆ ಅನ್ವಯ ಭೂಮಿ ಬಿಟ್ಟು ಕೊಟ್ಟ ರೈತರಿಗೆ ಪರಿಹಾರ ನಿಗದಿಪಡಿಸಲು ನಿರ್ಧರಿಸಲಾಗಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಿಬಿಸಿ ಯೋಜನೆಗೆ ಜನವರಿ ಅಥವಾ ಫೆಬ್ರವರಿಯಲ್ಲಿ ಮುಕ್ತಿ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಿಬಿಸಿ ಯೋಜನೆಗೆ 2,560 ಎಕರೆಯಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಈ ಕುರಿತು ಭೂಮಾಲೀಕರೊಂದಿಗೆ ಚರ್ಚಿಸಿ, ಸೂಕ್ತ ಪರಿಹಾರ ನಿಗದಿಪಡಿಸಲಾಗುವುದು. ಭೂಸ್ವಾಧಿಧೀನ ಪ್ರಕ್ರಿಯೆಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಪ್ರಾಧಿಕಾರದ ಅಧಿಕಾರಿ ಹೇಳಿದ್ದಾರೆ.
ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣ(ಬೆಂಗಳೂರು ಬಿಸಿನೆಸ್ ಕಾರಿಡಾರ್) ಕ್ಕೆ ಸರಕಾರದ ಖಾತರಿ ಮೂಲಕ ಸಾಲ ಪಡೆಯಲಾಗಿದೆ. 27 ಸಾವಿರ ಕೋಟಿ ಸಾಲ ನೀಡಲು ಹುಡ್ಕೊ ಸಮ್ಮತಿಸಿದೆ ಎನ್ನಲಾಗಿದೆ. ಈ ಪೈಕಿ ಪರಿಹಾರ ನೀಡುವುದಕ್ಕಾಗಿ 21 ಸಾವಿರ ಕೋಟಿ ರೂ ಹಾಗೂ ರಸ್ತೆ ನಿರ್ಮಾಣಕ್ಕೆ 6 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎನ್ನಲಾಗಿದೆ.
‘100 ಮೀಟರ್ ಅಗಲದ ಕಾರಿಡಾರ್ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. 50 ಮೀಟರ್ ಅಗಲದಲ್ಲಿ ಆರು ಪಥಗಳ ರಸ್ತೆ ನಿರ್ಮಿಸಲಾಗುತ್ತದೆ. ಉಳಿದ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ನಿರ್ಧರಿಸಲಾಗಿದೆ. ಕೇವಲ ಟೋಲ್ ಸಂಗ್ರಹದಿಂದ ಸಾಲ ಮರುಪಾವತಿ ಮಾಡುವುದು ಕಷ್ಟವಾಗಲಿದೆ. ಹೀಗಾಗಿ ಕಾರಿಡಾರ್‌ನ ಎರಡೂ ಬದಿಯ ಜಾಗವನ್ನು ವಾಣಿಜ್ಯ ಬಳಕೆಗೆ ನೀಡಲು ಚಿಂತಿಸಲಾಗುತ್ತಿದೆ.