ಬೆಂಗಳೂರು : ಚಳಿಗಾಲ ಅಧಿವೇಶನಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ಮಧ್ಯೆ ಆಡಳಿತ ಪಕ್ಷ ಹಣೆಯಲು ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸಜ್ಜಾಗಿ ನಿಂತಿವೆ. ಇದಕ್ಕೆ ತಕ್ಕ ಉತ್ತರ ಕೊಡಲು ಆಡಳಿತ ಪಕ್ಷ ಸಜ್ಜಾಗುತ್ತಿದ್ದು, ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ.
ಕೋವಿಡ್ ಕಾಲದ ಅಕ್ರಮದ ಕುರಿತು ನ್ಯಾ. ಮೈಕೆಲ್ ಕುನ್ಹಾ ಮಧ್ಯಂತರ ವರದಿ ನೀಡಿದ್ದು, ಅದನ್ನು ಆಧರಿಸಿ ಪ್ರತಿಪಕ್ಷ ಬಿಜೆಪಿ ವಿರುದ್ಧ ‘ಅಗ್ರೆಸ್ಸಿವ್’ ಆಗಿ ಮುಗಿಬೀಳುವಂತೆ ಸಂಪುಟ ಸಹೋದ್ಯೋಗಿಗಳಿಗೆ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.
ವಕ್ಫ್ ಆಸ್ತಿ ವಿವಾದ ಮುಂದಿಟ್ಟುಕೊಂಡು ಬಿಜೆಪಿ ನಡೆಸಲಿರುವ ರಾಜ್ಯವ್ಯಾಪಿ ಹೋರಾಟ ಸರ್ಕಾರಕ್ಕೆ ಮುಜುಗರ ತರುತ್ತಿದೆ. ಕೋವಿಡ್ ಅಕ್ರಮ ಕುರಿತ ತನಿಖಾ ವರದಿ ಮುಂದಿಟ್ಟುಕೊಂಡು ಬಿಜೆಪಿಯನ್ನು ಹಣಿಯುವ ಜತೆಗೆ, ನಾನಾ ತನಿಖಾ ವರದಿಗಳನ್ನು ಆಧರಿಸಿ ಕ್ರಮ ವಹಿಸುವುದು, ರಾಜಕೀಯ ವಿದ್ಯಮಾನಗಳು, ಪ್ರತಿಪಕ್ಷ ಪಾಳೆಯದ ತಂತ್ರಗಾರಿಕೆಗಳು, ಅಧಿವೇಶನ ತಯಾರಿ ಹಾಗೂ ನ.23 ರ ಉಪಚುನಾವಣೆ ಫಲಿತಾಂಶ ಕುರಿತು ಸಭೆಯಲ್ಲಿ ಚರ್ಚಿಸಿ, ಬಿಜೆಪಿ ವಿರುದ್ಧ ಹಿರಿಯ ನಾಯಕರು ಅಗ್ರೆಸಿವ್ ಆಗಿ ಮುಗಿಬೀಳುವಂವಂತೆ ಸೂಚಿಸಿದ್ದಾರೆ.
ನ್ಯಾ.ಕುನ್ಹಾ ವರದಿ ಆಧರಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಸಂಪುಟ ನಿರ್ಧರಿಸಿದ್ದು, ತಂಡದ ಮುಖ್ಯಸ್ಥರ ನೇಮಕ ವಿಚಾರವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಿವೇಚನೆಗೆ ಸಿಎಂ ಬಿಟ್ಟಿದ್ದಾರೆ. ಈ ವಿಚಾರದಲ್ಲಿ ಎಲ್ಲ ಸಚಿವರೂ ಅಗ್ರೆಸ್ಸಿವ್ ಆಗಿ ಮುಂದುವರಿಯಬೇಕು ಎಂದು ಹೇಳಿದ್ದಾರೆ.
ಬಿಪಿಎಲ್ ಕಾರ್ಡ್ ರ ದ್ದತಿ ವಿಚಾರದಲ್ಲಿ ಅನಗತ್ಯ ಟೀಕೆಗಳು ಎದುರಾಗುತ್ತಿವೆ. ಯಾವೊಂದು ಬಡ ಕುಟುಂಬದ ಬಿಪಿಎಲ್ ಕಾರ್ಡ್ ಕೂಡ ರದ್ದಾಗಿಲ್ಲ. ಅದಕ್ಕೆ ಅವಕಾಶವನ್ನೂ ಕೊಡುವುದಿಲ್ಲ. ಈ ಕುರಿತು ಅಂಕಿ -ಅಂಶಗಳ ಸಮೇತ ಉತ್ತರ ನೀಡುವಂತೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ತಾಕೀತು ಮಾಡಿದ್ದಾರೆ.