ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೊಡಸಣಿ ಕ್ರಾಸ್ ಎನ್ ಎಚ್ 66ನಲ್ಲಿ ನಡೆದಿದೆ. ಕಾರು ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕಾರು ಚಲಾಯಿಸುತ್ತಿದ್ದ ಹೊನ್ನಾವರದ ಹರೀಶ್ ನಾಯ್ಕ್ (30) ಸಾವನ್ನಪ್ಪಿರುವ ವ್ಯಕ್ತಿ. ಅಲ್ಲದೇ, ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿ ಹೊನ್ನಾವರದ ದಿನೇಶ್ ಆಚಾರ್ಯ (45) ಗಂಭೀರ ಗಾಯಗೊಂಡಿದ್ದಾರೆ.
ಟಾಟಾ ನ್ಯಾನೋ ಕಾರಿನಲ್ಲಿ ಹೊನ್ನಾವರದಿಂದ ಅಂಕೋಲಾದತ್ತ ಹರೀಶ್ ಹಾಗೂ ದಿನೇಶ್ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅತಿಯಾದ ವೇಗವೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.