ಗುಬ್ಬಿ : ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾರನಹಳ್ಳಿ ಪ್ರಭಾಕರ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಹಾರನಹಳ್ಳಿ ಪ್ರಭಾಕರ್ ಹಾಗೂ ಎಂ.ಎನ್. ಕೋಟೆ ಚನ್ನಮಲ್ಲಿಕಾರ್ಜುನ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಪ್ರಭಾಕರ್ 21 ಮತಗಳಿಗೆ 21 ಮತಗಳನ್ನು ಗಳಿಸಿ ಭರ್ಜರಿ ಜಯಗಳಿಸಿದ್ದಾರೆ. ಆದರೆ, ಕಣದಲ್ಲಿದ್ದ ಚನ್ನಮಲ್ಲಿಕಾರ್ಜುನ್ ಕೂಡ ತಮ್ಮ ಮತವನ್ನೂ ಪ್ರಭಾಕರ್ ಗೆ ಹಾಕುವುದರ ಮೂಲಕ ಶೂನ್ಯ ಸಾಧನೆ ಮಾಡಿದ್ದಾರೆ. ಚನ್ನಮಲ್ಲಿಕಾರ್ಜುನ್ ಈ ಹಿಂದೆ ನಡೆದಿದ್ದ ಚುನಾವಣೆಯಲ್ಲಿ ಕೂಡ ಶೂನ್ಯ ಮತ ಪಡೆದಿದ್ದರು ಎನ್ನಲಾಗಿದೆ.
ನೂತನ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಾಕರ್ ಮಾತನಾಡಿ, ನನ್ನ ಪ್ರತಿ ಸ್ಪರ್ಧಿ ಎಂ.ಎನ್. ಕೋಟೆ ಚನ್ನಮಲ್ಲಿಕಾರ್ಜುನ್ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿ ಕೆ.ಎನ್. ರಾಜಣ್ಣ ಅವರ ಶಿಷ್ಯ ಎಂದು ಸುಳ್ಳು ಹೇಳಿಕೊಂಡಿದ್ದರು. ಸೋಲಿನ ಭೀತಿಯಲ್ಲಿ ಅವರ ಮತವನ್ನೂ ನಮಗೆ ಹಾಕಿ ಈಗ ರಾಜಣ್ಣ ಅವರ ಪರ ಎಂದು ಹೇಳಿಕೊಂಡಿದ್ದಾರೆ ಎಂದರು.
ಕೆ.ಎನ್.ರಾಜಣ್ಣ ಮಾರ್ಗದರ್ಶನದಲ್ಲಿ ಡಿಸಿಸಿ ಬ್ಯಾಂಕ್ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ರಾಜಣ್ಣ ಅವರು ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್ ವಿಷಯದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಜತೆಯಲ್ಲಿ ಡಿಸಿಸಿ ಬ್ಯಾಂಕ್ ಅಭಿವೃದ್ದಿಗೆ ಶ್ರಮಿಸುತ್ತೇವೆ. ರೈತರಿಗೆ ಸಹಕಾರ ಸಂಘದಿಂದ ಕೃಷಿ ಸಾಲ, ಗೊಬ್ಬರ ಸಾಲ, ಅಡಿಕೆ ಸಾಲ ಹಾಗೂ ಚಿನ್ನಾಭರಣ ಸಾಲವನ್ನು ಕೂಡ ನೀಡುತ್ತಿದ್ದೇವೆ. ಜತೆಗೆ ಎಲ್ಲ ರೈತರಿಗೂ ಸಾಲವನ್ನು ನೀಡಲಾಗುತ್ತಿದ್ದು ಮುಂದೆ ಅರ್ಹ ಫಲಾನುಭವಿಗಳಿಗೆ ಸೂಕ್ತ ಸಹಾಯವಾಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಕೆ.ಎನ್.ರಾಜಣ್ಣ ಅವರು ರೈತರಿಗೆ ಶೂನ್ಯ ಬಡ್ಡಿದರಲ್ಲೂ ಸಾಲವನ್ನು ಕೊಡುತ್ತಿದ್ದು, ರೈತರು ಹೈನುಗಾರಿಕೆ ಮೂಲಕ ಹೆಚ್ಚಿನ ಲಾಭ ಪಡೆದು ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಸಹಕಾರ ಸಂಘವು ಲಾಭಾಂಶದಲ್ಲಿ ಇದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದಿದ್ದಾರೆ.
ಈ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಎಸ್.ಡಿ. ದಿಲೀಪ್ ಕುಮಾರ್, ಪರಮೇಶ್, ಓಂಕಾರ್, ದಿಲೀಪ್, ಲಕ್ಷ್ಮೀಪತಿ, ನಿರ್ದೇಶಕರಾದ ಜಗದೀಶ್, ಸುರೇಶ್ ಗೌಡ, ನಲ್ಲೂರು ನಟರಾಜು, ಸತೀಶ್, ಯೋಗೀಶ್ , ಚಿದಾನಂದ್ ಸೇರಿದಂತೆ ಹಲವರು ಇದ್ದರು.