ಐಸಿಸಿ, ನೂತನ ಟೆಸ್ಟ್ ಶ್ರೇಯಾಂಕ ಬಿಡುಗಡೆಯಾಗಿದ್ದು, ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಆಟಗಾರರು ಭರ್ಜರಿ ಮುಂಬಡ್ತಿ ಪಡೆದಿದ್ದರೆ, ಕಳಪೆ ಪ್ರದರ್ಶನ ನೀಡಿದ ಕೆಲವರು ಹಿಂದೆ ಉಳಿದಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಶತಕದ ಇನ್ನಿಂಗ್ಸ್ ಆಡಿದ್ದ ರಿಷಬ್ ಪಂತ್, ಅಗ್ರ 10ರೊಳಗೆ ಸ್ಥಾನ ಪಡೆದಿದ್ದರೆ, ಕಳಪೆ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಟಾಪ್ 10 ರಿಂದ ಹೊರ ಬಿದ್ದಿದ್ದಾರೆ. ನಾಯಕ ರೋಹಿತ್ ಶರ್ಮಾ ಕೂಡ 10ರಿಂದ ಹೊರ ಹೋಗುವ ಹಾದಿಯಲ್ಲಿದ್ದಾರೆ.
ಮೊದಲ ಟೆಸ್ಟ್ ನ ಎರಡೂ ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 56 ರನ್ ಹಾಗೂ 10 ರನ್ ಗಳಿಸಿದ್ದ ಜೈಸ್ವಾಲ್ ಐದನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಈ ಟೆಸ್ಟ್ ಪಂದ್ಯಕ್ಕೂ ಮುನ್ನ 6ನೇ ಸ್ಥಾನದಲ್ಲಿದ್ದ ಜೈಸ್ವಾಲ್ ಒಂದು ಸ್ಥಾನ ಮುಂಬಡ್ತಿ ಪಡೆದಿದ್ದಾರೆ.
ಚೆನ್ನೈ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 39 ರನ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ 109 ರನ್ ಗಳಿಸಿದ್ದ ರಿಷಬ್ ಪಂತ್ 6ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಈ ಮೂಲಕ ಮತ್ತೆ 10 ರೊಳಗೆ ಸ್ಥಾನ ಪಡೆದಿದ್ದಾರೆ.
ಆರಂಭಿಕ ಶುಭ್ಮನ್ ಗಿಲ್ ಕೂಡ ಭರ್ಜರಿ ಮುಂಬಡ್ತಿ ಪಡೆದಿದ್ದು, ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್ ನಲ್ಲಿ ಶತಕ ಪಡೆದು 19ನೇ ಸ್ಥಾನದಿಂದ 14ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಈ ಮೊದಲು 5ನೇ ಸ್ಥಾನದಲ್ಲಿದ್ದ ನಾಯಕ ರೋಹಿತ್ ಶರ್ಮಾ ಬರೋಬ್ಬರಿ 5 ಸ್ಥಾನ ಕಳೆದುಕೊಂಡಿದ್ದು, 10ನೇ ಸ್ಥಾನಕ್ಕೆ ಇಳಿದಿದ್ದಾರೆ.
ವಿರಾಟ್ ಕೊಹ್ಲಿ ಕೂಡ ಇದೀಗ ಟಾಪ್ 10 ರಿಂದ ಹೊರ ಬಿದ್ದಿದ್ದು, 12ನೇ ಸ್ಥಾನಕ್ಕೆ ಜಾರಿದ್ದಾರೆ. ಟೆಸ್ಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ ನ ಜೋ ರೂಟ್ ಅಗ್ರ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 852 ಎರಡನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ 760 ರೇಟಿಂಗ್ ಪಾಯಿಂಟ್‌ಗಳೊಂದಿಗೆ 3ನೇ ಸ್ಥಾನದಲ್ಲಿ ಹಾಗೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 4ನೇ ಸ್ಥಾನದಲ್ಲಿದ್ದಾರೆ.