ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಥುವಾದಲ್ಲಿ ಸೇನಾ ಬೆಂಗಾವಲು ಪಡೆ ಮೇಲೆ ಉಗ್ರರು(Terrorists) ದಾಳಿ ಮಾಡುವುದಕ್ಕೂ ಮುನ್ನ ಗ್ರಾಮಸ್ಥರಿಗೆ ಬಂದೂಕು ತೋರಿಸಿ ಆಹಾರವನ್ನು (Food) ಬೇಯಿಸಿಕೊಡಿದ್ದರು ಎನ್ನಲಾಗಿದೆ.
ದಾಳಿಯ ಸಮಯದಲ್ಲಿ ಉಗ್ರರು ಬಾಡಿ ಕ್ಯಾಮೆರಾ (Body Camera) ಧರಿಸಿದ್ದರು. ಅಲ್ಲದೇ ಸೇನೆಯ ಶಸ್ತ್ರಾಸ್ತ್ರ ಕಸಿದುಕೊಳ್ಳಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಕಥುವಾ ಜಿಲ್ಲೆಯ ಬದ್ನೋಟಾ ಗ್ರಾಮದ ಹತ್ತಿರ ಕಡಿದಾದ ಮಚೇಡಿ-ಕಿಂಡ್ಲಿ-ಮಲ್ಹಾರ್ ಪರ್ವತದ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಸೈನಿಕರ ಮೇಲೆ ಹೊಂಚು ಹಾಕಿ ದಾಳಿ ನಡೆಸಿದ್ದರು. ದಾಳಿಯಲ್ಲಿ ಹಿರಿಯ ಅಧಿಕಾರಿ ಸೇರಿ ಐವರು ಹುತಾತ್ಮರಾಗಿದ್ದರು.
ಭಯೋತ್ಪಾದಕರು ಕಡಿದಾದ ರಸ್ತೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಹೊಂಚು ಹಾಕಿ ದಾಳಿ ನಡೆಸುತ್ತಿದ್ದಾರೆ. ಇಂತಹ ಜಾಗಗಳಿಗೆ ಹೆಚ್ಚಿನ ಸೈನಿಕರನ್ನು ಕಳುಹಿಸಲು ಸಮಯ ಬೇಕಾಗುತ್ತದೆ. ಅಷ್ಟರಲ್ಲಿ ಪಾಪಿಗಳು ಕೃತ್ಯ ಎಸಗುತ್ತಿದ್ದಾರೆ ಎನ್ನಲಾಗುತ್ತಿದೆ.
ಕೃತ್ಯ ಸಂಬಂಧ 20ಕ್ಕೂ ಅಧಿಕ ಶಂಕಿತರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಥುವಾ ದಾಳಿಯನ್ನು ಪಾಕಿಸ್ತಾನಿ ಭಯೋತ್ಪಾದಕರು ನಡೆಸಿದ್ದು, ಅವರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾರೆ. ಭಯೋತ್ಪಾದಕರು ಸ್ಥಳೀಯ ಬೆಂಬಲಿಗರ ಸಹಾಯದಿಂದ ಈ ಪ್ರದೇಶದಲ್ಲಿ ಹೊಂಚು ಹಾಕಿ ದಾಳಿ ಮಾಡಿದ್ದಾರೆ. ರಕ್ಷಣಾ ಸಚಿವಾಲಯವು ಸೈನಿಕರ ಬಲಿದಾನವನ್ನು ವ್ಯರ್ಥ ಮಾಡಲು ಬಿಡುವುದಿಲ್ಲ. ಇದಕ್ಕೆ ಪ್ರತೀಕಾರ ತೀರಿಸಲಾಗುವುದು ಎಂದು ಹೇಳಿದೆ.