ನವದೆಹಲಿ: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಭಯೋತ್ಪಾದಕರ ಅಡಗುತಾಣವೊಂದನ್ನು (J&K Terror Hideout) ಭದ್ರತಾಪಡೆಗಳು ಪತ್ತೆಹಚ್ಚಿವೆ. ಈ ಮೂಲಕ ದೊಡ್ಡ ಮಟ್ಟದ ದಾಳಿಯೊಂದನ್ನು ತಡೆಯುವಲ್ಲಿ ಪಡೆಗಳು ಯಶಸ್ವಿಯಾಗಿವೆ. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ 26 ನಾಗರಿಕರು ಮೃತಪಟ್ಟ ಘಟನೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸರು ಪೂಂಛ್ ಜಿಲ್ಲೆಯ ಸುರಾನ್ ಕೋಟ್‌ನಲ್ಲಿ ಭಾನುವಾರ ಸಂಜೆ ಜಂಟಿ ಕಾರ್ಯಾಚರಣೆ ನಡೆಸಿ, ಉಗ್ರರ ಅಡಗುತಾಣವನ್ನು ಭೇದಿಸುವಲ್ಲಿ ಸಫಲರಾಗಿದ್ದಾರೆ. ಸ್ಥಳದಿಂದ 5 ಸ್ಫೋಟಕ ಸಾಧನಗಳು, 2 ವೈರ್‌ಲೆಸ್ ಸೆಟ್‌ಗಳು, ಮೂರು ಬ್ಲ್ಯಾಂಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರ ಪತ್ತೆಗಾಗಿ ಶೋಧ ಕಾರ್ಯವನ್ನೂ ಆರಂಭಿಸಲಾಗಿದೆ.
ಪೂಂಛ್ ಮತ್ತು ರಜೌರಿ ಕಳೆದ ಕೆಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಗಳು ಮತ್ತು ಎನ್‌ಕೌಂಟರ್‌ಗಳ ಕೇಂದ್ರಬಿಂದುವಾಗಿದೆ
ವಿಶೇಷವೆಂದರೆ, ಭಯೋತ್ಪಾದಕರ ಅಡಗುತಾಣವನ್ನು ಭದ್ರತಾ ಪಡೆಗಳು ಭೇದಿಸಿದ ಕೆಲವೇ ಗಂಟೆಗಳಲ್ಲಿ, ಪಾಕಿಸ್ತಾನ ಸೇನೆಯೂ ರಾತ್ರೋರಾತ್ರಿ ಪೂಂಛ್ ಮತ್ತು ಇತರ ವಲಯಗಳಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ತನ್ನ “ಅಪ್ರಚೋದಿತ” ಗುಂಡಿನ ದಾಳಿಯನ್ನು ಪುನರಾರಂಭಿಸಿತು.
2025ರ ಮೇ 04-05 ರ ರಾತ್ರಿಯಲ್ಲಿ, ಪಾಕಿಸ್ತಾನದ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಪೂಂಛ್, ರಾಜೌರಿ, ಮೆಂಧಾರ್, ನೌಶೇರಾ, ಸುಂದರ್ಬಾನಿ ಮತ್ತು ಅಖ್ನೂರ್ ಮುಂಚೂಣಿ ನೆಲೆಗಳನ್ನು ಗುರಿಯಾಗಿಸಿಕೊಂಡು ನಿಯಂತ್ರಣ ರೇಖೆಯ ಉದ್ದಕ್ಕೂ ಸಣ್ಣ ಶಸ್ತ್ರಾಸ್ತ್ರಗಳ ಮೂಲಕ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ. ಭಾರತೀಯ ಸೇನೆಯು ತಕ್ಷಣವೇ ಸೂಕ್ತ ರೀತಿಯಲ್ಲಿ ಪ್ರತಿದಾಳಿ ನಡೆಸಿದೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಪಡೆಯು ಕದನ ವಿರಾಮ ಉಲ್ಲಂಘಿಸಿರುವುದು ಇದು ಸತತ 11ನೇ ಬಾರಿ. ಏಪ್ರಿಲ್ 22ರ ಪಹಲ್ಗಾಮ್ ಹತ್ಯಾಕಾಂಡದ ನಂತರ ಭದ್ರತಾ ಸಂಸ್ಥೆಗಳು ಹೆಚ್ಚು ಅಲರ್ಟ್ ಆಗಿವೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಇಲ್ಲಿ ನಡೆದ ಅತಿದೊಡ್ಡ ಭಯೋತ್ಪಾದಕ ದಾಳಿ ಇದಾಗಿತ್ತು.



















