ಶಿಲ್ಲಾಂಗ್ (ಮೇಘಾಲಯ) : ಇಲ್ಲಿನ ಥಾಂಗ್ಸ್ಕು ಪ್ರದೇಶದ ಕಲ್ಲಿದ್ದಲು ಗಣಿಯೊಂದರಲ್ಲಿ ಇಂದು (ಗುರುವಾರ) ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 16 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಲವು ಕಾರ್ಮಿಕರು ಗಣಿಯೊಳಗೆ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
“ನಾವು ಇಲ್ಲಿಯವರೆಗೆ 16 ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಸ್ಫೋಟದ ವೇಳೆ ಗಣಿಯಲ್ಲಿದ್ದ ಕಾರ್ಮಿಕರ ನಿಖರ ಸಂಖ್ಯೆ ಇನ್ನೂ ದೊರೆತಿಲ್ಲ. ಹೆಚ್ಚಿನವರು ಸಿಲುಕಿಕೊಂಡಿರುವ ಶಂಕೆ ಇದೆ” ಎಂದು ಅಧಿಒಕಾರಿಗಳು ತಿಳಿಸಿದ್ದಾರೆ.
ಕಲ್ಲಿದ್ದಲು ಗಣಿಗಾರಿಕೆ ಚಟುವಟಿಕೆಗಳ ಸಮಯದಲ್ಲಿ ಸ್ಫೋಟ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ.
“ಮೇಲ್ನೋಟಕ್ಕೆ ಇಲ್ಲಿ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿರುವಂತೆ ಕಾಣಿಸುತ್ತಿದೆ. ಸ್ಫೋಟಕ್ಕೆ ಕಾರಣ ಈವರೆಗೆ ತಿಳಿದು ಬಂದಿಲ್ಲ. ದುರಂತದ ಸಂಪೂರ್ಣ ತನಿಖೆ ನಡೆಸಲಾಗುವುದು” ಎಂದು ಪೂರ್ವ ಜೈಂಟಿಯಾ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿಕಾಶ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಈ ಭಾಗಗಳಲ್ಲಿ ಫೆ.7ರಂದು ವಿದ್ಯುತ್ ವ್ಯತ್ಯಯ | ನಿಮ್ಮ ಏರಿಯಾ ಇದ್ಯಾ ಚೆಕ್ ಮಾಡಿ!


















