ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮತ್ತೆ ಮುಂದೂಡಿದೆ.
ಶನಿವಾರ ಹೈಕೋರ್ಟ್ ಏಕ ಸದಸ್ಯ ಪೀಠವು ವಾದ, ಪ್ರತಿವಾದ ಆಲಿಸಿದ ನಂತರ ವಿಚಾರಣೆಯನ್ನು ಸೆಪ್ಟೆಂಬರ್ 2ಕ್ಕೆ ಮುಂದೂಡಿತು. ಸಿಎಂ ಸಿದ್ದರಾಮಯ್ಯ ಪರ ವಕೀಲ ರವಿವರ್ಮ ಕುಮಾರ್ ವಾದ ವಾದಮಂಡಿಸಿದ್ದಾರೆ. ಸುದೀರ್ಘ ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್, ಅರ್ಜಿ ವಿಚಾರಣೆಯನ್ನು ಸೋಮವಾರ (ಸೆಪ್ಟೆಂಬರ್ 2ಕ್ಕೆ) ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿತು.
ತನಿಖೆಗೆ ಅನುಮತಿ ನೀಡಬೇಕೋ ಅಥವಾ ಬೇಡವೋ ಎಂಬುವುದನ್ನು ನಿರ್ಧರಿಸಬೇಕು. ಅನುಮತಿ ನೀಡಿದ್ದು ಸರಿಯೋ, ಇಲ್ಲವೋ ನಿರ್ಧರಿಸಬೇಕು. ಹೀಗಾಗಿ ಮಧ್ಯಂತರ ಆದೇಶ ಮುಂದುವರಿಕೆ ಆಗುವುದು ಎಂದು ನ್ಯಾ.ಎಂ.ನಾಗಪ್ರಸನ್ನ ಹೇಳಿದ್ದಾರೆ.
2021ರ ಅ.25ರಂದು 50:50 ನಿವೇಶನ ಹಂಚಿಕೆಗೆ ಮನವಿ ಸಲ್ಲಿಸಲಾಗಿತ್ತು. ಆಗ ಸಿಎಂ ಪುತ್ರ ಇದ್ದ ಮುಡಾ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ನಂತರ ಸಿಎಂ ಪತ್ನಿ 2021ರ ನ.25ರಂದು ಹಕ್ಕು ಬಿಡುಗಡೆ ಮಾಡಿದ್ದಾರೆ. ನಂತರ ಸಿಎಂ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಯಾವುದೇ ಜಮೀನು ಕಳೆದುಕೊಳ್ಳದೇ ಸಿಎಂ ಪತ್ನಿ ಪರಿಹಾರ ಪಡೆದಿದ್ದಾರೆ ಎಂದು ದೂರುದಾರ ಟಿ.ಜೆ.ಅಬ್ರಹಾಂ ಪರ ವಕೀಲ ರಂಗನಾಥ್ ರೆಡ್ಡಿ ವಾದ ಮಂಡಿಸಿದರು.
ದೂರುದಾರ ಸ್ನೇಹಮಯಿ ಕೃಷ್ಣ ಪರ ಮಣೀಂದರ್ ಸಿಂಗ್ ವಾದ ಮಂಡಿಸಿದ್ದು, ಸ್ವತಂತ್ರ ತನಿಖಾ ಸಂಸ್ಥೆಯಿಂದ ಈ ಕೇಸ್ ನ ತನಿಖೆಗೆ ಮನವಿ ಮಾಡಿದ್ದಾರೆ. ಇಂದೋರ್ ಡೆವಲಪ್ಮೆಂಟ್ ಕೇಸ್ ಉಲ್ಲೇಖಿಸಿದ ಮಣೀಂದರ್, ಒಂದು ಬಾರಿ ಭೂಸ್ವಾಧೀನ ಅಂತಿಮಗೊಂಡಾಗ ಬದಲಿ ಜಮೀನಿಗೆ ಅವಕಾಶವಿಲ್ಲ. ಪರಿಹಾರದ ಹಣಕ್ಕೆ ಶೇ.9ರಷ್ಟು ಬಡ್ಡಿ ಪಡೆಯಲು ಮಾತ್ರ ಅವಕಾಶವಿದೆ. ಮುಡಾ ಹೆಸರಿನಲ್ಲಿದ್ದ ಜಮೀನನ್ನು ಹೇಗೆ ಡಿನೋಟಿಫೈ ಮಾಡಲಾಯಿತು. ಇದೊಂದು ಪ್ಲಾನ್ ಮಾಡಿರುವ ಅಕ್ರಮ ಎಂದು ವಾದಿಸಿದ್ದಾರೆ. ಎಲ್ಲ ವಾದ-ವಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಮುಂದೂಡಿತು.