ಅತ್ಯಾಚಾರ, ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಜೈಲುಪಾಲಾಗಿದ್ದ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಗೆ ಷರತ್ತುಬದ್ಧ ತಾತ್ಕಾಲಿಕ ಜಾಮೀನು ಮಂಜೂರಾಗಿದೆ.
ಸದ್ಯ ಜಾನಿ ಮಾಸ್ಟರ್ ಗೆ ಐದು ದಿನಗಳ ತಾತ್ಕಾಲಿಕ ಜಾಮೀನು ನೀಡಲಾಗಿದ್ದು, ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲೆಂದು ಈ ಜಾಮೀನನ್ನು ನೀಡಲಾಗಿದೆ ಎನ್ನಲಾಗುತ್ತಿದೆ.
ಕಳೆದ ತಿಂಗಳು ಜಾನಿ ಮಾಸ್ಟರ್ ನನ್ನು ಪೊಲೀಸರು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಿದ್ದರು. ಯುವತಿಯ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಜಾನಿ ಮಾಸ್ಟರ್ ವಿರುದ್ಧ ಪೋಕ್ಸೋ ಪ್ರಕರಣ ಸಹ ದಾಖಲು ಮಾಡಿದ್ದರು. ಯುವತಿ ನೀಡಿದ್ದ ದೂರಿನಂತೆ ಜಾನಿ ಮಾಸ್ಟರ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಾಗ ಆಕೆಗೆ ವಯಸ್ಸು 16 ಆಗಿತ್ತು ಎನ್ನಲಾಗಿದೆ. ಹೀಗಾಗಿ ಜಾನಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿತ್ತು.
ಜಾನಿಗೆ ಇತ್ತೀಚೆಗಷ್ಟೇ ರಾಷ್ಟ್ರಪ್ರಶಸ್ತಿ ದೊರೆತಿದ್ದು, ರಾಷ್ಟ್ರಪ್ರಶಸ್ತಿಯನ್ನು ಸ್ವೀಕರಿಸಲು ಮಾತ್ರವೇ ಈ ಜಾಮೀನು ನೀಡಲಾಗಿದೆ. ಜಾನಿ ಮಾಸ್ಟರ್ ನ ಪತ್ನಿ ಆಯೆಷಾ, ಪತಿ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಯುವತಿ ವಿರುದ್ಧ ದೂರು ದಾಖಲಿಸಿದ್ದು, ಆಕೆ, ಹಣಕ್ಕಾಗಿ ಶ್ರೀಮಂತರನ್ನು, ಸೆಲೆಬ್ರಿಟಿಗಳನ್ನು ಪ್ರೀತಿ ಹೆಸರಲ್ಲಿ ಬುಟ್ಟಿಗೆ ಹಾಕಿಕೊಳ್ಳುವ ಕಾರ್ಯ ಮಾಡುತ್ತಾಳೆ. ನನ್ನ ಪತಿಗೆ ಆಕೆ ಮಾನಸಿಕ ಹಿಂಸೆ ನೀಡಿದ್ದಾಳೆ. ನನ್ನ ಪತಿಯನ್ನು ಆಕೆ ತನ್ನ ವಶದಲ್ಲಿ ಇಟ್ಟುಕೊಂಡಿದ್ದಳು, ಹಣ ಕೊಡದಿದ್ದಕ್ಕೆ ಹೆದರಿಸಿದ್ದಳು ಎಂದು ಉಲ್ಲೇಖಿಸಿದ್ದಾರೆ.