ಗೈನೆಸ್ವಿಲ್ಲೆ (ಅಮೆರಿಕ) : ಸಾವಿನ ಅಂಚಿನಲ್ಲಿದ್ದಾಗ ಮನುಷ್ಯನಿಗೆ ಮೊದಲು ನೆನಪಾಗುವುದು ತನ್ನ ಪ್ರೀತಿಪಾತ್ರರು. ಅಮೆರಿಕದ ಜಾರ್ಜಿಯಾ ಪ್ರಾಂತ್ಯದ ಗೈನೆಸ್ವಿಲ್ಲೆ ನಗರದಲ್ಲಿ ವಿಮಾನವೊಂದು ಜನನಿಬಿಡ ರಸ್ತೆಯ ಮೇಲೆ ಪತನಗೊಳ್ಳುವ ಕ್ಷಣಗಳ ಮೊದಲು, ಪೈಲಟ್ ತನ್ನ ಪತ್ನಿಗೆ ನೀಡಿದ ಭಾವನಾತ್ಮಕ ಸಂದೇಶ ಈಗ ಜಗತ್ತಿನ ಗಮನ ಸೆಳೆದಿದೆ. ತಾಂತ್ರಿಕ ದೋಷದಿಂದ ವಿಮಾನ ರಸ್ತೆಯ ಮೇಲೆ ಅಪ್ಪಳಿಸುವ ಮುನ್ನ, ಪೈಲಟ್ ನಿಯಂತ್ರಣ ಕೊಠಡಿಗೆ (ATC) ಕರೆ ಮಾಡಿ “ನನ್ನ ಪತ್ನಿ ಮೊಲ್ಲಿಗೆ ನಾನು ತುಂಬಾ ಪ್ರೀತಿಸುತ್ತೇನೆಂದು ತಿಳಿಸಿ” ಎಂದು ಕಣ್ಣೀರಿಟ್ಟಿದ್ದಾರೆ.
ಥಾಮಸ್ ರೋಜರ್ಸ್ ಎಂಬ ಪೈಲಟ್ ಮತ್ತು ಒಬ್ಬ ತರಬೇತಿ ಪಡೆಯುತ್ತಿರುವ ಪೈಲಟ್ ಲೀ ಗಿಲ್ಮರ್ ಮೆಮೋರಿಯಲ್ ವಿಮಾನ ನಿಲ್ದಾಣದಿಂದ ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಎಂಜಿನ್ ಕೈಕೊಟ್ಟಿದೆ. ವಿಮಾನವನ್ನು ಮತ್ತೆ ರನ್‌ವೇಗೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾದಾಗ, ಪೈಲಟ್ ರೋಜರ್ಸ್ ವಿಮಾನವನ್ನು ರಸ್ತೆಯ ಮೇಲೆ ಇಳಿಸಲು ನಿರ್ಧರಿಸಿದರು. ಏರ್ ಟ್ರಾಫಿಕ್ ಕಂಟ್ರೋಲ್‌ನ ರೆಕಾರ್ಡಿಂಗ್‌ನಲ್ಲಿ, “ನಾವು ವಿಮಾನ ನಿಲ್ದಾಣ ತಲುಪಲು ಸಾಧ್ಯವಿಲ್ಲ. ದಯವಿಟ್ಟು ನನ್ನ ಪತ್ನಿ ಮತ್ತು ಪೋಷಕರಿಗೆ ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿ” ಎಂಬ ಅವರ ಗದ್ಗದಿತ ಧ್ವನಿ ಕೇಳಿಬಂದಿದೆ.
ರಸ್ತೆಯ ಮೇಲೆ ಸಿನಿಮಾ ಶೈಲಿಯ ಲ್ಯಾಂಡಿಂಗ್
ವಿಮಾನವು ವೇಗವಾಗಿ ರಸ್ತೆಗೆ ಇಳಿಯುತ್ತಿದ್ದಂತೆ ಅಲ್ಲಿದ್ದ ವಾಹನಗಳ ಮೇಲೆ ಅಪ್ಪಳಿಸಿದೆ. ಅನಿರೀಕ್ಷಿತವಾಗಿ ಆಕಾಶದಿಂದ ವಿಮಾನ ರಸ್ತೆಗೆ ಇಳಿಯುವುದನ್ನು ಕಂಡು ಬೆಚ್ಚಿಬಿದ್ದ ವಾಹನ ಸವಾರರು ಜೀವ ಉಳಿಸಿಕೊಳ್ಳಲು ಕಾರುಗಳನ್ನು ಅಕ್ಕಪಕ್ಕಕ್ಕೆ ಚಲಾಯಿಸಿದ್ದಾರೆ. ರಸ್ತೆಯಲ್ಲಿದ್ದ ಹಲವಾರು ವಾಹನಗಳಿಗೆ ವಿಮಾನವು ಗುದ್ದಿದ್ದರೂ, ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಸೇರಿದಂತೆ ರಸ್ತೆಯಲ್ಲಿದ್ದ ಜನರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ. ಮೃತ್ಯುವಿನ ದವಡೆಯಿಂದ ಪಾರಾದ ಪೈಲಟ್‌ಗಳು ತಮಗೆ ದೊರೆತ ಮರುಜನ್ಮಕ್ಕೆ ದೇವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ಭೀಕರ ಅಪಘಾತದ ದೃಶ್ಯಗಳು ಹತ್ತಿರದ ಸಿಸಿಟಿವಿ ಕೆಮೆರಾಗಳಲ್ಲಿ ಸೆರೆಯಾಗಿದ್ದು, ವಿಮಾನವು ರಸ್ತೆಯ ಮೇಲೆ ಸ್ಕಿಡ್ ಆಗುತ್ತಾ ಹೋಗಿ ವಾಹನಗಳಿಗೆ ಡಿಕ್ಕಿ ಹೊಡೆಯುವುದು ಸ್ಪಷ್ಟವಾಗಿ ದಾಖಲಾಗಿದೆ. ಈ ಎಂಜಿನ್ ವೈಫಲ್ಯಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತನಿಖೆ ಆರಂಭಿಸಿದೆ. ಪ್ರಾಣಾಪಾಯದಿಂದ ಪಾರಾದ ಪೈಲಟ್ ರೋಜರ್ಸ್ ಮಾಧ್ಯಮಗಳೊಂದಿಗೆ ಮಾತನಾಡಿ, “ನಾವು ನಿಯಮದ ಪ್ರಕಾರ ಎಲ್ಲವನ್ನೂ ಮಾಡಿದೆವು, ಆದರೆ ಎತ್ತರ ಕಡಿಮೆಯಿದ್ದ ಕಾರಣ ರಸ್ತೆಯ ಮೇಲೆ ಇಳಿಸುವುದು ಅನಿವಾರ್ಯವಾಗಿತ್ತು” ಎಂದು ಹೇಳಿದ್ದಾರೆ.
ಇದನ್ನೂ ಓದಿ : ತವರು ಕ್ರೀಡಾಂಗಣ ಬದಲಾವಣೆಗೆ ಮುಂದಾಗಿದ್ದ RCBಗೆ ಶಾಕ್ | ಎನ್‌ಒಸಿ ನಿರಾಕರಿಸಿದ ಎಂಸಿಎ.. ಬೆಂಗಳೂರಲ್ಲೇ IPL ಉದ್ಘಾಟನೆ ಫಿಕ್ಸಾ?



















