ಬೆಂಗಳೂರು: ಟ್ಯಾಟೂಗೆ ಬಳಸುವ ಇಂಕ್‌ನಲ್ಲಿ 22 ಹೆವಿ ಮೆಟಲ್ ಬಳಕೆ ಮಾಡುತ್ತಿರುವುದು ಆಹಾರ ಸುರಕ್ಷತೆ (Food Safety) ಮತ್ತು ಔಷಧ ಆಡಳಿತದ ಅಧಿಕಾರಿಗಳ ವಿಶ್ಲೇಷಣಾ ವರದಿಯಲ್ಲಿ ಬೆಳಕಿಗೆ ಬಂದಿದೆ. ಇಂಕ್ ನಲ್ಲಿರುವ ಮೈಕ್ರೋ ಆರ್ಗ್ಯಾನಿಸಮ್ ಮತ್ತು ಹೆವಿ ಮೆಟಲ್ಸ್ ಚರ್ಮದ ಮೂಲಕ ದೇಹ ಪ್ರವೇಶಿಸುತ್ತದೆ. ಹೀಗಾಗಿ ಹಲವಾರು ಚರ್ಮರೋಗಗಳು ಕಾಣಿಸುತ್ತವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.
ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತಯಾರಾಗುವ ಮತ್ತು ಮಾರಾಟಕ್ಕಾಗಿ ಸರಬರಾಜಾಗುತ್ತಿರುವ ಔಷಧಿಗಳ ಗಳ ಮತ್ತು ಕಾಂತಿವರ್ಧಕ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳುವುದು ಮತ್ತು ಉತ್ತಮ ಗುಣಮಟ್ಟದ, ಸುರಕ್ಷಿತ ಹಾಗೂ ಪರಿಣಾಮಕಾರಿ ಔಷಧಗಳನ್ನು ನಿಯಂತ್ರಿತ ಬೆಲೆಗಳಲ್ಲಿ ಗ್ರಾಹಕರಿಗೆ ದೊರಕುವಂತೆ ಮಾಡಲಾಗುವುದು ಎಂದಿದ್ದಾರೆ.
ಜನವರಿ 2025ರಲ್ಲಿ 1,133 ಔಷಧಗಳ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ. ಅವುಗಳಲ್ಲಿ 938 ಉತ್ತಮ ಗುಣಮಟ್ಟದ ಔಷಧಗಳೆಂದು, 106 ಉತ್ತಮ ಗುಣಮಟ್ಟವಿಲ್ಲದ ಔಷಧಿಗಳೆಂದು ಘೋಷಿತವಾಗಿದೆ. ಫೆಬ್ರವರಿ ತಿಂಗಳಲ್ಲಿ 1,841 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯಲಾಗಿದೆ. 58 ಮಾದರಿಗಳು ಅನುತ್ತಮ ಗುಣಮಟ್ಟದ ಔಷಧಿಗಳೆಂದು ಘೋಷಿತವಾಗಿದೆ ಎಂದು ಹೇಳಿದ್ದಾರೆ.
2024ರ ಡಿಸೆಂಬರ್ ಹಾಗೂ 2025ರ ಜನವರಿ ತಿಂಗಳಲ್ಲಿ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮದ 1940 ಮತ್ತು ಅದರಡಿಯ ನಿಯಾಮಾವಳಿಗಳನ್ನು ಉಲ್ಲಂಘನೆ ಮಾಡಿದ 75 ಸಂಸ್ಥೆಗಳ ವಿರುದ್ಧ ಮಾನ್ಯ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಕಳಪೆ ಗುಣಮಟ್ಟದ ಔಷಧಗಳು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗದಂತೆ ತಡೆಯಬೇಕು. ಈಗ ಇರುವ ದಾಸ್ತಾನುಗಳನ್ನು ಹಿಂಪಡೆಯಲು ಚಿಲ್ಲರೆ ಔಷಧ ಮಳಿಗೆಗಳು, ಸಗಟು ಮಾರಾಟಗಾರರು, ತಯಾರಿಕಾ ಸಂಸ್ಥೆಗಳ ವಿವರಗಳನ್ನು ಗಣಕೀಕರಣಗೊಳಿಸಲಾಗುತ್ತಿದೆ ಎಂದಿದ್ದಾರೆ.
ಕೇಕ್ ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬಳಸುತ್ತಿರುವ ಕುರಿತಂತೆ 295 ಮಾದರಿಗಳನ್ನ ಸಂಗ್ರಹಿಸಿ ವಿಶ್ಲೇಷಣೆಗೊಳಪಡಿಸಲಾಗಿದ್ದು ಅವುಗಳಲ್ಲಿ 12 ಮಾದರಿಗಳು (ಶೇ.4.06ರಷ್ಟು) ಅಸುರಕ್ಷಿತ ಎಂದು ವರದಿಯಾಗಿತ್ತು. 2025ರಲ್ಲಿ ಪುನಃ ಪರಿಶೀಲನೆ ನಡೆಸಿದಾಗ 7 ಮಾದರಿಗಳು ಅನ್‌ಸೇಫ್ ಎಂದು ವರದಿ ಬಂದಿದೆ. ನಿಗದಿತ ಮಿತಿಯೊಳಗೆ ಬಣ್ಣ ಬಳಸುವಂತೆ ಸೂಚಿಸಲಾಗಿದೆ ಎಂದಿದ್ದಾರೆ.