ಚೆನ್ನೈ: ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ(National Education Policy – NEP)ಗೆ ಸೆಡ್ಡು ಹೊಡೆದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಇಂದು ಕೊತ್ತೂರುಪುರಂನಲ್ಲಿರುವ ಅಣ್ಣಾ ಶತಮಾನೋತ್ಸವ ಗ್ರಂಥಾಲಯದಲ್ಲಿ ರಾಜ್ಯ ಶಿಕ್ಷಣ ನೀತಿಯನ್ನು (State Education Policy – SEP) ಅನಾವರಣಗೊಳಿಸಿದರು.
ಹೊಸ ನೀತಿಯನ್ನು ರೂಪಿಸಲು ನಿವೃತ್ತ ನ್ಯಾಯಮೂರ್ತಿ ಮುರುಗೇಶನ್ ಅವರ ನೇತೃತ್ವದಲ್ಲಿ 14 ಸದಸ್ಯರ ಸಮಿತಿಯನ್ನು 2022ರಲ್ಲಿ ತಮಿಳುನಾಡು ಸರ್ಕಾರ ರಚಿಸಿತ್ತು.
ಈ ಸಮಿತಿಯು ಕಳೆದ ವರ್ಷದ ಜುಲೈನಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ತನ್ನ ಶಿಫಾರಸ್ಸುಗಳನ್ನು ಸಲ್ಲಿಸಿತ್ತು. ಈಗ ಈ ನೀತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಎಸ್ಇಪಿಯಲ್ಲಿನ ಪ್ರಮುಖ ಅಂಶಗಳು
ಭಾಷಾ ನೀತಿ: ಎನ್ಇಪಿಯ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿ, ರಾಜ್ಯದ ದ್ವಿಭಾಷಾ ನೀತಿಯನ್ನು ಮುಂದುವರಿಸಲು ಎಸ್ಇಪಿ ಶಿಫಾರಸು ಮಾಡಿದೆ.
ಪ್ರವೇಶ ಪರೀಕ್ಷೆಗಳು: ಕಲಾ ಮತ್ತು ವಿಜ್ಞಾನ ಪದವಿಪೂರ್ವ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಬದಲು, 11 ಮತ್ತು 12ನೇ ತರಗತಿಯ ಒಟ್ಟು ಅಂಕಗಳ ಆಧಾರದ ಮೇಲೆ ಪ್ರವೇಶ ನೀಡಲು ಶಿಫಾರಸು ಮಾಡಲಾಗಿದೆ.
ಪಬ್ಲಿಕ್ ಪರೀಕ್ಷೆಗಳಿಗೆ ವಿರೋಧ: 3, 5 ಮತ್ತು 8ನೇ ತರಗತಿಗಳಿಗೆ ಎನ್ಇಪಿ ಸೂಚಿಸಿದ್ದ ಪಬ್ಲಿಕ್ ಪರೀಕ್ಷೆಗಳನ್ನು ಎಸ್ಇಪಿ ವಿರೋಧಿಸಿದೆ. ಇದು ಪ್ರಗತಿ ವಿರೋಧಿ, ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಮತ್ತು ಹೆಚ್ಚು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯಲು ಹಾಗೂ ಶಿಕ್ಷಣದ ವಾಣಿಜ್ಯೀಕರಣಕ್ಕೆ ಕಾರಣವಾಗಬಹುದು ಎಂದು ಪರಿಗಣಿಸಲಾಗಿದೆ.
ಅಭಿವೃದ್ಧಿ ಯೋಜನೆಗಳು: ಸಮಿತಿಯು ವಿಜ್ಞಾನ, ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ಇಂಗ್ಲಿಷ್ ಭಾಷೆಗೆ ಒತ್ತು ನೀಡಲು ಪ್ರಸ್ತಾಪಿಸಿದೆ. ಅಲ್ಲದೆ, ರಾಜ್ಯ-ನಿರ್ವಹಣೆಯ ಸಂಸ್ಥೆಗಳಲ್ಲಿ ಗಣನೀಯ ಹೂಡಿಕೆ ಮಾಡಲು ಶಿಫಾರಸು ಮಾಡಿದೆ.
ಶಿಕ್ಷಣವನ್ನು ರಾಜ್ಯ ಪಟ್ಟಿಗೆ ಸೇರಿಸಲು ಆಗ್ರಹ: ಸಮಿತಿಯು ಶಿಕ್ಷಣವನ್ನು ಸಮವರ್ತಿ ಪಟ್ಟಿಯಿಂದ (Concurrent List) ತೆಗೆದುಹಾಕಿ, ಮತ್ತೆ ರಾಜ್ಯ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದೆ.
ಕೇಂದ್ರ ಮತ್ತು ರಾಜ್ಯದ ನಡುವಿನ ಭಿನ್ನಾಭಿಪ್ರಾಯ
ಕೇಂದ್ರ ಮತ್ತು ರಾಜ್ಯದ ನಡುವೆ ಅನುದಾನಕ್ಕೆ ಸಂಬಂಧಿಸಿ ನಡೆಯುತ್ತಿರುವ ಸಂಘರ್ಷದ ನಡುವೆಯೇ ಈ ಹೊಸ ನೀತಿಯನ್ನು ಅನಾವರಣಗೊಳಿಸಲಾಗಿದೆ. ಎನ್ಇಪಿ ಜಾರಿಗೊಳಿಸಲು ನಿರಾಕರಿಸಿದ್ದರಿಂದ ಕೇಂದ್ರವು ಸಮಗ್ರ ಶಿಕ್ಷಾ ಯೋಜನೆಯ ಅಡಿಯಲ್ಲಿ ರಾಜ್ಯಕ್ಕೆ ಬರಬೇಕಿದ್ದ 2,152 ಕೋಟಿ ರೂಪಾಯಿಗಳನ್ನು ತಡೆಹಿಡಿದಿದೆ ಎಂದು ತಮಿಳುನಾಡು ಆರೋಪಿಸುತ್ತಾ ಬಂದಿದೆ.
ಈ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ತಮಿಳುನಾಡು ಎನ್ಇಪಿ ಅಳವಡಿಸಿಕೊಂಡರೆ ಮಾತ್ರವೇ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ, ಎಸ್ಇಪಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಚಿವ ಉದಯನಿಧಿ ಸ್ಟಾಲಿನ್, “ಅವರು 1,000 ಕೋಟಿ ರೂಪಾಯಿ ಕೊಟ್ಟರೂ ತಮಿಳುನಾಡು ಎನ್ಇಪಿ ಜಾರಿಗೊಳಿಸುವುದಿಲ್ಲ. ತಮಿಳುನಾಡಿಗೆ ಯಾವುದೇ ರೀತಿಯ ಹೇರಿಕೆ ಇಷ್ಟವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.