ಚೆನ್ನೈ: ಸಾಮಾಜಿಕ ಸುಧಾರಕ ಪೆರಿಯಾರ್ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಡಿರುವ ಮಾತುಗಳಿಗೆ ತಮಿಳು ನಟ, ಟಿವಿಕೆ(ತಮಿಳಗ ವೆಟ್ರಿ ಕಳಗಂ) ಸ್ಥಾಪಕ ವಿಜಯ್(Tamil actor Vijay) ಕೆಂಡವಾಗಿದ್ದಾರೆ. ಪೆರಿಯಾರ್(Periyar) ಅವರನ್ನು ಸಮರ್ಥಿಸಿಕೊಂಡ ನಟ-ರಾಜಕಾರಣಿ ವಿಜಯ್, ಕೇಂದ್ರ ಸರ್ಕಾರದ ವಿರುದ್ಧದ ಟೀಕೆಗಳನ್ನು ಬೇರೆಡೆಗೆ ತಿರುಗಿಸಲು ಬಿಜೆಪಿ ದ್ರಾವಿಡ ನಾಯಕ(Dravidian leader)ನನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೇ, ಪೆರಿಯಾರ್ ಅವರು ನೀಡಿರುವ ಕೊಡುಗೆಗಳನ್ನು ವಿವರಿಸಿದ ಅವರು, “ಪೆರಿಯಾರ್ ಅವರು ಬಾಲ್ಯ ವಿವಾಹವನ್ನು ಹೇಗೆ ವಿರೋಧಿಸಿದರು, ವಿಧವಾ ಮರುವಿವಾಹವನ್ನು ಹೇಗೆ ಬೆಂಬಲಿಸಿದರು ಮತ್ತು ಜಾತಿ ದೌರ್ಜನ್ಯಗಳನ್ನು ಹೇಗೆ ವಿರೋಧಿಸಿದರು ಎಂದು ಹೇಳುತ್ತಾ ಹೋದರೆ ಅದಕ್ಕೆ ಅಂತ್ಯವೆಂಬುದೇ ಇರುವುದಿಲ್ಲ” ಎಂದಿದ್ದಾರೆ. ಮೀಸಲಾತಿಯನ್ನು ಪ್ರತಿಪಾದಿಸುವಲ್ಲಿ ಪೆರಿಯಾರ್ ಅವರ ದೂರದೃಷ್ಟಿಯನ್ನು ಒತ್ತಿಹೇಳಿದ ಅವರು, ” ಜನರು ಈಗ ಮಾತನಾಡುವ ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿಯನ್ನು ಪೆರಿಯಾರ್ ಅವರು ನೂರು ವರ್ಷಗಳ ಹಿಂದೆಯೇ ಪ್ರತಿಪಾದಿಸಿದ್ದರು” ಎಂದು ಹೇಳಿದ್ದಾರೆ.
ಪೆರಿಯಾರ್ ಇಂದಿಗೂ ಪ್ರಸ್ತುತರಾಗಿದ್ದಾರೆ ಎಂದು ಪ್ರತಿಪಾದಿಸಿದ ಅವರು, “ಇಂದಿಗೂ, ಪೆರಿಯಾರ್ ವಿವಾದವನ್ನು ಹುಟ್ಟುಹಾಕುವಷ್ಟು ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಟೀಕೆಗಳನ್ನು ಮರೆಮಾಚುವಷ್ಟು ಪ್ರಬಲರಾಗಿದ್ದಾರೆ… ತಮಿಳುನಾಡು ಇನ್ನೂ ಅವರನ್ನು ಏಕೆ ಗೌರವಿಸುತ್ತದೆ ಮತ್ತು ಹೊಗಳುತ್ತದೆ ಎನ್ನುವುದನ್ನು ತೋರಿಸಲು ಇದಕ್ಕಿಂತ ಇನ್ನೇನು ಬೇಕು? ಎಂದೂ ಪ್ರಶ್ನಿಸಿದ್ದಾರೆ. ಜೊತೆಗೆ, “ಪೆರಿಯಾರ್ ಅವರು ತಮಿಳು ಭಾಷೆಯನ್ನು ಅನಾಗರಿಕ ಭಾಷೆ ಎಂದು ಕರೆದಿರುವುದಕ್ಕೆ ಕೇಂದ್ರ ಸಚಿವೆ ಮನಸ್ಸಿಗೆ ನೋವು ಮಾಡಿಕೊಂಡಿದ್ದಾರೆಯೇ? ಹಾಗಿದ್ದರೆ, ಅವರು ತಮಿಳುನಾಡಿನಲ್ಲಿ ತ್ರಿಭಾಷಾ ನೀತಿ ಹೇರಿಕೆಯನ್ನು ನಿಲ್ಲಿಸುತ್ತಾರೆಯೇ” ಎಂದೂ ವಿಜಯ್ ಪ್ರಶ್ನಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಲೋಕಸಭೆಯಲ್ಲಿ ಮಾತನಾಡುತ್ತಾ, ಪೆರಿಯಾರ್ ಅವರನ್ನು ಪೂಜಿಸುವ ವಿಚಾರದಲ್ಲಿ ಡಿಎಂಕೆ ಬೂಟಾಟಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದರು. “ನಾನು ಅವರ ಹೆಸರನ್ನು ಹೇಳಲು ಬಯಸುವುದಿಲ್ಲ, ಆದರೆ ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದನ್ನು ತಮಿಳಿನ ಬಗ್ಗೆ ಸಣ್ಣ ಅರಿವು ಇರುವವರೂ ಅರ್ಥಮಾಡಿಕೊಳ್ಳುತ್ತಾರೆ. ತಮಿಳು ಭಾಷೆಯ ಬಗ್ಗೆ “ಅವಹೇಳನಕಾರಿಯಾಗಿ” ಮಾತನಾಡಿದ ವ್ಯಕ್ತಿಯನ್ನು ಡಿಎಂಕೆ ಆರಾಧಿಸುತ್ತಿದೆ. ಅವರು ನಮ್ಮ ದ್ರಾವಿಡ ಐಕಾನ್ ಎಂದು ಹೇಳುತ್ತಿದೆ” ಎಂದು ತಮಿಳು ನಿಯತಕಾಲಿಕದ ಆಯ್ದ ಭಾಗಗಳನ್ನು ಉಲ್ಲೇಖಿಸಿ ನಿರ್ಮಲಾ ಸೀತಾರಾಮನ್ ಡಿಎಂಕೆ ವಿರುದ್ಧ ವಾಕ್ ಪ್ರಹಾರ ನಡೆಸಿದ್ದರು.
“ತಮಿಳು ಅನಾಗರಿಕ ಭಾಷೆ ಎಂದು ಪದೇ ಪದೇ ಹೇಳುತ್ತಿದ್ದ ವ್ಯಕ್ತಿಯ ಫೋಟೋವನ್ನು ಪ್ರತಿ ಕೋಣೆಯಲ್ಲಿ ಇಟ್ಟು, ಹೂಮಾಲೆ ಹಾಕಿ ಪೂಜಿಸಲಾಗುತ್ತಿದೆ. ಅವರು ದ್ರಾವಿಡ ಚಳವಳಿಯ ಐಕಾನ್ ಎಂದು ಹೇಳಲಾಗುತ್ತದೆ. ಡಿಎಂಕೆಯವರ ಬೂಟಾಟಿಕೆಯನ್ನೊಮ್ಮೆ ನೋಡಿ” ಎಂದೂ ನಿರ್ಮಲಾ ಹೇಳಿದ್ದರು.
ಈ ಹೇಳಿಕೆಗಳು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಬಗ್ಗೆ ನಡೆಯುತ್ತಿರುವ ವಿವಾದವನ್ನು ಪುನರುಜ್ಜೀವನಗೊಳಿಸಿವೆ. ಡಿಎಂಕೆ ತಮಿಳುನಾಡಿನ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, “ಅವರು ಅಪ್ರಾಮಾಣಿಕರು ಮತ್ತು ಅವರು ತಮಿಳುನಾಡಿನ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ … ಅವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.
ಡಿಎಂಕೆ ಆರಂಭದಲ್ಲಿ ಎನ್ಇಪಿಗೆ ಒಪ್ಪಿಕೊಂಡಿತ್ತು ಆದರೆ ನಂತರ ರಾಜಕೀಯ ಕಾರಣಗಳಿಗಾಗಿ ಹಿಂದೆ ಸರಿದಿದೆ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಡಿಎಂಕೆ ಈ ಆರೋಪಗಳನ್ನು ನಿರಾಕರಿಸಿದ್ದು, “ನಾವು ಎನ್ಇಪಿಯನ್ನು ಪೂರ್ಣವಾಗಿ ಸ್ವೀಕರಿಸಲು ಸಾಧ್ಯವಿಲ್ಲ ಮತ್ತು ತ್ರಿಭಾಷಾ ಸೂತ್ರವು ತಮಿಳುನಾಡಿಗೆ ಸ್ವೀಕಾರಾರ್ಹವಲ್ಲ” ಎಂದು ಹೇಳಿದೆ. ನೀತಿಯನ್ನು ಜಾರಿಗೆ ತರಲು ನಿರಾಕರಿಸಿದ್ದಕ್ಕಾಗಿ ಕೇಂದ್ರವು ಶಿಕ್ಷಣ ನಿಧಿಯನ್ನು ತಡೆಹಿಡಿಯಲು ಸಾಧ್ಯವಿಲ್ಲ ಎಂದು ಪಕ್ಷ ಪ್ರತಿಪಾದಿಸಿದೆ.