ದುಬೈ: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಗೆದ್ದು ಬೀಗಿದೆ. ಈ ಪಂದ್ಯ ವೀಕ್ಷಿಸಲು ಭಾರತೀಯ ಕ್ರಿಕೆಟ್ ತಂಡದ (Team India) ಸ್ಪಿನ್ನರ್ ಯಜುವೇಂದ್ರ ಚಹಲ್ (Yuzvendra Chahal) ಆಗಮಿಸಿದ್ದರು. ಆದರೆ, ಅವರೊಂದಿಗೆ ಯುವತಿಯೊಬ್ಬರು ಕಾಣಿಸಿಕೊಂಡಿದ್ದರು. ಇದು ವೈರಲ್ ಆಗಿತ್ತು.
ನೃತ್ಯ ಸಂಯೋಜಕಿ ಧನಶ್ರೀ ವರ್ಮಾ (Dhanashree Verma) ಮತ್ತು ಚಹಲ್ ಬೇರ್ಪಟ್ಟಿದ್ದು, ಡಿವೋರ್ಸ್ ಪಡೆದ ನಂತರ ಚಹಲ್ ಮತ್ತೆ ಡೇಟಿಂಗ್ ಮಾಡುತ್ತಿದ್ದಾರಾ? ಎಂಬ ಪ್ರಶ್ನೆ ಎದ್ದಿತ್ತು. ಇದನ್ನು ಹಲವರು ಟ್ರೋಲ್ ಮಾಡಿದ್ದರು. ಈಗ ಈ ಕುರಿತು ಧನಶ್ರೀ ಸಂದೇಶವೊಂದನ್ನು ಹಾಕಿದ್ದು, ಮಹಿಳೆಯರನ್ನು ದೂಷಿಸುವುದು ಯಾವಾಗಲೂ ಫ್ಯಾಷನ್‌ನಲ್ಲಿದೆʼ ಎಂದು ಬರೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಚಹಲ್ ಅಭಿಮಾನಿಗಳು ಧನಶ್ರೀ ಕಾಲೆಳೆಯುತ್ತಿದ್ದಾರೆ.
ಸೂಪರ್ ಸಂಡೇ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯ ವೀಕ್ಷಣೆಗೆ ಬಂದಿದ್ದ ಚಹಲ್ ಗ್ಯಾಲರಿಯಲ್ಲಿ ಆರ್‌ಜೆ ಮಹ್ವಾಶ್ ಜೊತೆ ಕುಳಿತಿದ್ದಾರೆ. ಚಹಲ್- ಆರ್.ಜೆ ಮಹ್ವಾಶ್ ಅವರ ಫುಲ್ ವೈರಲ್ ಆಗಿರುವ ಫೋಟೋಗಳಿಗೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಹಿಂದೆ ಕೂಡ ಮಹ್ವಾಶ್ (RJ Mahvash) ಜೊತೆ ಚಹಲ್ ಕಾಣಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆದ ಬೆನ್ನಲ್ಲೇ ಗಾಸಿಪ್‌ಗಳು ಎದ್ದಿದ್ದವು. ಈ ಗಾಸಿಪ್‌ಗಳನ್ನು ಮಹ್ವಾಶ್ ತಳ್ಳಿ ಹಾಕಿದ್ದರು. ಹೀಗಿದ್ದರೂ ಈಗ ಮತ್ತೆ ಚಹಲ್ ಜೊತೆ ಮಹ್ವಾಶ್ ಕಾಣಿಸಿಕೊಂಡಿದ್ದಾರೆ.
ಯಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ (Dhanashree Verma) ಅಧಿಕೃತವಾಗಿ ಬೇರೆ ಬೇರೆಯಾಗಿದ್ದಾರೆ. ಫೆ.20 ರಂದು ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ದಂಪತಿಯ ಅಂತಿಮ ವಿಚ್ಛೇದನ (Divorce) ವಿಚಾರಣೆ ನಡೆದಿತ್ತು.