ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪೂರ್ವ ಮುಂಗಾರು ಮಳೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಅವರು ನಗರದ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಕೇಂದ್ರೀಯ ವಿಹಾರ್ ಪ್ರದೇಶಕ್ಕೆ ರಕ್ಷಣೆ:
2024ರ ಪ್ರವಾಹದ ಬಳಿಕ ಯಲಹಂಕ ಕೆರೆಯ ವೆಂಕಟಾಲ ಕೆರೆಯ ಕೋಡಿಯಿಂದ ಜಕ್ಕೂರು ಕೆರೆಯವರೆಗೆ 2.7 ಕಿ.ಮೀ ಉದ್ದದ 35 ಮೀ. ಅಗಲದ ರಾಜಕಾಲುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 1.5 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಭಾಗದಲ್ಲಿ ಕಚ್ಚಾ ಡ್ರೈನ್ ನಿರ್ಮಿಸಲಾಗಿದೆ. ಇದರಿಂದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಪ್ರದೇಶದಲ್ಲಿ ಪ್ರವಾಹ ಸಮಸ್ಯೆ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.
ಟಾಟಾ ನಗರದಲ್ಲಿ ನೀರುಗಾಲುವೆ ನಿರ್ಮಾಣ:
ದೊಡ್ಡಬೊಮ್ಮಸಂದ್ರ ಕೆರೆಯಿಂದ ಟಾಟಾ ನಗರವರೆಗೆ 900 ಮೀಟರ್ ಉದ್ದದ 20 ಅಡಿ ಅಗಲದ ನೀರುಗಾಲುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.

ಹೆಬ್ಬಾಳ ಕೆರೆ ಅಭಿವೃದ್ಧಿ:
192 ಎಕರೆ ವ್ಯಾಪ್ತಿಯ ಹೆಬ್ಬಾಳ ಕೆರೆಯಲ್ಲಿ 15.90 ಕೋಟಿ ರೂ. ವೆಚ್ಚದ ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಒತ್ತುವರಿಯಿಂದ ತೆರವುಗೊಳಿಸಿದ 16 ಎಕರೆ ಪ್ರದೇಶದಲ್ಲಿ ವೆಟ್‌ಲ್ಯಾಂಡ್ ನಿರ್ಮಾಣ, ಇನ್‌ಲೆಟ್ ವ್ಯವಸ್ಥೆ ಹಾಗೂ ಹೂಳೆತ್ತುವ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.
ಹೆಬ್ಬಾಳ ಜಂಕ್ಷನ್‌ನಲ್ಲಿ ವಾಟರ್ ಲಾಗಿಂಗ್ ನಿವಾರಣೆ:
ಹೆಬ್ಬಾಳ ಜಂಕ್ಷನ್‌ನಲ್ಲಿ ನೀರು ನಿಲ್ಲುವ ಸಮಸ್ಯೆ ತಪ್ಪಿಸಲು ಗ್ರೇಟಿಂಗ್ ಸರಿಪಡಿಸುವುದು, ಲೆವೆಲ್ ಕರೆಕ್ಷನ್, ಪೈಪ್ ಕಲ್ವರ್ಟ್ ಅಳವಡಿಕೆ ಹಾಗೂ ಶೋಲ್ಡರ್ ಡ್ರೈನ್ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ.

ಮಾನ್ಯತಾ ಟೆಕ್ ಪಾರ್ಕ್ ಬಳಿ ಕಾಲುವೆ ನಿರ್ಮಾಣ:
ವೀರಣ್ಣಪಾಳ್ಯ ಸರ್ವೀಸ್ ರಸ್ತೆಯಿಂದ ಹೆಬ್ಬಾಳ ವ್ಯಾಲಿವರೆಗೆ 1.2 ಕಿ.ಮೀ ಉದ್ದದ ಮಾನವ ನಿರ್ಮಿತ ಕಾಲುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಬಾಕಿ ಭಾಗದ ಆರ್‌ಸಿಸಿ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.
ನಾಗವಾರ ಜಂಕ್ಷನ್‌ನಲ್ಲಿ 715 ಮೀಟರ್ ಕಾಮಗಾರಿಯಲ್ಲಿ ಬಾಕಿ ಇರುವ 70 ಮೀಟರ್ ಕೆಲಸವನ್ನು 15 ದಿನಗಳಲ್ಲಿ ಪೂರ್ಣಗೊಳಿಸಿ ಮಳೆಗಾಲಕ್ಕೂ ಮುನ್ನ ಕಾಂಕ್ರೀಟ್ ಕಾಮಗಾರಿ ಮುಗಿಸುವಂತೆ ಸೂಚಿಸಿದರು. ಜಲಮಂಡಳಿಯ ಸ್ಯಾನಿಟರಿ ಡ್ರೈನ್ ಕ್ಲಿಯರ್ ಮಾಡಿ, ಪಂಪಿಂಗ್ ವ್ಯವಸ್ಥೆ ಹಾಗೂ ಡ್ರೈನ್ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್, ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯಂತರ ರಾಘವೇಂದ್ರ ಪ್ರಸಾದ್, ರಾಜೇಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ‘ಗಣತಿ ಕಾರ್ಯದಿಂದ ವಿಕಲಚೇತನರಿಗೆ ವಿನಾಯಿತಿ ನೀಡಿ, ಇಲ್ಲದಿದ್ದರೆ ಹೋರಾಟ’ – ಬೀರಪ್ಪ ಅಂಡಗಿ ಚಿಲವಾಡಗಿ ಎಚ್ಚರಿಕೆ



















