ಟಿ20 ವಿಶ್ವಕಪ್ 2024 ರ ಎರಡನೇ ಸೆಮಿಫೈನಲ್ ಪಂದ್ಯ ಭಾರತ ಹಾಗೂ ಇಂಗ್ಲೆಂಡ್ ಮಧ್ಯೆ ನಡೆಯುತ್ತಿದ್ದು, ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದಿರುವ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ.
ಆದರೆ, ನಿರೀಕ್ಷೆಯಂತೆ ಮಳೆ ಅಡ್ಡಿಯಾಗಿದೆ. ಮಳೆ ಅಡ್ಡಿಯಾಗುವ ವೇಳೆಗೆ ಟೀಂ ಇಂಡಿಯಾ ಮೊದಲ 8 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿತ್ತು. ರೋಹಿತ್ ಶರ್ಮಾ ಹಾಗು ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಆಡುತ್ತಿದ್ದರು. ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ ಬೇಗನೆ ಪೆವಿಲಿಯನ್ ಸೇರಿದ್ದಾರೆ.
ಆದರೆ, ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಭಾರೀ ಕಳಪೆ ಪ್ರದರ್ಶನಕ್ಕೆ ಕಾರಣವಾಗುತ್ತಿದ್ದಾರೆ. ಸೆಮಿಫೈನಲ್ಲಿ ಆದರೂ ಆಡಬಹುದು ಎಂಬ ನಿರೀಕ್ಷೆ ಮತ್ತೆ ಹುಸಿಯಾಗಿದೆ. ಈ ಹಿಂದೆ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದರು.
ಆದರೆ ಈ ಪಂದ್ಯದಲ್ಲಿ ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ, ಕೇವಲ 9 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನಿಂಗ್ಸ್ ಆರಂಭಿಸಿದಾಗಿನಿಂದಲೂ ರನ್ಗಾಗಿ ತಿಣುಕಾಡುತ್ತಿದ್ದ ಕೊಹ್ಲಿ, ಒಂದೇ ಒಂದು ಸಿಕ್ಸರ್ ಸಿಡಿಸಿ, ಕ್ಲೀನ್ ಬೌಲ್ಡ್ ಆಗಿ ಪೆವಲೀಯನ್ ಸೇರಿದರು.
ಟಿ20 ವಿಶ್ವಕಪ್‌ನ ನಾಕೌಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಗಳಿಸದೆ ಔಟಾಗಿರುವುದು ಇದೇ ಮೊದಲು. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನ 4 ನಾಕೌಟ್ ಪಂದ್ಯಗಳನ್ನು ಆಡಿದ್ದರು. ಈ ಎಲ್ಲ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಸಿಡಿಸಿದ್ದಾರೆ. ಆದರೆ ಈ ಬಾರಿ ವಿರಾಟ್ ಎರಡಂಕಿಯನ್ನೂ ದಾಟಲಿಲ್ಲ.
2014 ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 72 ರನ್ ಬಾರಿಸಿದ್ದ ವಿರಾಟ್, ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 77 ರನ್ ಗಳಿಸಿದ್ದರು. 2016 ರ ವಿಶ್ವಕಪ್‌ನಲ್ಲಿ ವಿಂಡೀಸ್ ವಿರುದ್ಧ ಅಜೇಯ 89 ರನ್, 2022 ರಲ್ಲಿ ಇಂಗ್ಲೆಂಡ್ ವಿರುದ್ಧ 50 ರನ್ ಗಳಿಸಿದ್ದರು.
ಆದರೆ, ವಿರಾಟ್ ಈ ಆವೃತ್ತಿ ಪೂರ್ತಿ ಕಳಪೆ ಪ್ರದರ್ಶನ ತೋರಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ ಕೇವಲ 75 ರನ್ ಮಾತ್ರ ಗಳಿಸಿದ್ದಾರೆ. ಐರ್ಲೆಂಡ್ ವಿರುದ್ಧ 1 ರನ್, ಪಾಕಿಸ್ತಾನ್ ವಿರುದ್ಧ 4, ಯುಎಸ್ಎ ವಿರುದ್ಧ 0, ಅಫ್ಘಾನಿಸ್ತಾನ ವಿರುದ್ಧ 24, ಬಾಂಗ್ಲಾದೇಶ ವಿರುದ್ಧ 37, ಆಸ್ಟ್ರೇಲಿಯಾ ವಿರುದ್ಧ 0, ಇಂಗ್ಲೆಂಡ್ ವಿರುದ್ಧ 9 ರನ್ ಗಳಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ.